​ದೇಶದಲ್ಲಿ ಉದ್ಯೋಗ ಸೃಷ್ಟಿ ಪ್ರಮಾಣ ಕುಸಿತ : ಸರ್ಕಾರಿ ಅಂಕಿ ಅಂಶ

Update: 2020-02-19 03:47 GMT

ಹೊಸದಿಲ್ಲಿ : ದೇಶದಲ್ಲಿ ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ, ದೀನದಯಾಳ್ ಅಂತ್ಯೋದಯ ಯೋಜನೆಯಂಥ ವಿವಿಧ ಸರ್ಕಾರಿ ಯೋಜನೆಗಳಿಂದ ಆಗುವ ಉದ್ಯೋಗ ಸೃಷ್ಟಿ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿರುವುದನ್ನು ಸರ್ಕಾರಿ ಅಂಕಿ ಅಂಶಗಳು ಬಹಿರಂಗಪಡಿಸಿವೆ.

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಸಂಸತ್ತಿನಲ್ಲಿ ನೀಡಿದ ಅಂಕಿ ಅಂಶಗಳಿಂದ ಈ ಆತಂಕಕಾರಿ ಬೆಳವಣಿಗೆ ಬೆಳಕಿಗೆ ಬಂದಿದೆ.

ಪಿಎಂಇಜಿಪಿ ಯೋಜನೆಯಡಿ ಸೃಷ್ಟಿಯಾದ ಉದ್ಯೋಗಗಳ ಸಂಖ್ಯೆ 2018-19ರಲ್ಲಿ 5.87 ಲಕ್ಷ ಇದ್ದುದು 2019-20ರ ಡಿಸೆಂಬರ್‌ಗೆ 2.57 ಲಕ್ಷಕ್ಕೆ ಕುಸಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 3.87 ಲಕ್ಷ ಮಂದಿ ಇದರ ಪ್ರಯೋಜನ ಪಡೆದಿದ್ದರು. ಈ ಸಂಖ್ಯೆ 2016-17ರಲ್ಲಿ 4 ಲಕ್ಷ ಹಾಗೂ 15-16ರಲ್ಲಿ 3.23 ಲಕ್ಷ ಆಗಿತ್ತು.

ಪಿಎಂಇಜಿಪಿ ಸಾಲ ಸಂಪರ್ಕಿತ ಸಬ್ಸಿಡಿ ಯೋಜನೆಯಾಗಿದ್ದು, ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಸಚಿವಾಲಯ ಇದನ್ನು ಅನುಷ್ಠಾನಗೊಳಿಸುತ್ತದೆ. ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಈ ವರ್ಷದ ಉದ್ಯೋಗ ಸೃಷ್ಟಿ ಕನಿಷ್ಠವಾಗಿದೆ ಎಂದು ಅಂಕಿ ಅಂಶ ಬಹಿರಂಗಪಡಿಸಿದೆ.

ಡಿಎವೈ-ಎನ್‌ಯುಎಲ್‌ಎಂ ಯೋಜನೆಯಡಿ ಕೌಶಲಯುಕ್ತ ಕಾರ್ಮಿಕರ ಉದ್ಯೋಗ ಪ್ರಮಾಣ ಕೂಡಾ ಕುಸಿದಿರುವುದನ್ನು ಅಂಕಿ ಅಂಶಗಳು ದೃಢಪಡಿಸಿವೆ. 2018-19ರಲ್ಲಿ 1.78 ಲಕ್ಷ ಮಂದಿ ಈ ಯೋಜನೆಯಡಿ ಉದ್ಯೋಗ ಪಡೆದಿದ್ದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಜನವರಿ 27ರವರೆಗೆ ಉದ್ಯೋಗ ಪಡೆದವರ ಸಂಖ್ಯೆ ಕೇವಲ 44,066 ಅಂತೆಯೇ ನರೇಗಾ ಯೋಜನೆಯಲ್ಲಿ ಸೃಷ್ಟಿಯಾದ ಉದ್ಯೋಗ ದಿನಗಳ ಸಂಖ್ಯೆ ಕೂಡಾ 26,796ರಿಂದ 20,577ಕ್ಕೆ ಇಳಿದಿದೆ ಎಂದು ಅಂಕಿ ಅಂಶ ದೃಢಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News