ಸಹಕಾರ ಸಾರಿಗೆ: ನಾಲ್ಕನೇ ದಿನಕ್ಕೆ ಮುಂದುವರಿದ ಅನಿರ್ದಿಷ್ಟಾವಧಿ ಧರಣಿ

Update: 2020-02-19 09:07 GMT

ಚಿಕ್ಕಮಗಳೂರು: ತೀರ್ವ ಆರ್ಥಿಕ ಮುಗ್ಗಟ್ಟಿನಿಂದ ಸಾರಿಗೆ ಸೇವೆ ಸ್ಥಗಿತ ಗೊಳಿಸಿರುವ ಮಲೆನಾಡಿನ ಪ್ರತಿಷ್ಠಿತ ಸಹಕಾರ ಸಾರಿಗೆಯ ನೌಕರರ ಅನಿಧಿಷ್ಟಾವಧಿ ಧರಣಿ ಸತ್ಯಾಗ್ರಹ ಬುಧವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

ಬೇಡಿಕೆ ಈಡೇರುವವರೆಗೆ ಧರಣಿ ಮುಂದುವರಿಯುತ್ತದೆ ಎಂದು ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗು ಹಾಲಿ ವ್ಯವಸ್ಥಾಪಕ ನಿರ್ದೇಶಕ ಎಚ್.ಜಿ. ವಿಶ್ವನಾಥ್ 'ವಾರ್ತಾ ಭಾರತಿ'ಯೊಂದಿಗೆ ಮಾತನಾಡುತ್ತಾ ತಿಳಿಸಿದರು.

ನಷ್ಟವನ್ನು ಭರಿಸಲು ಸರಕಾರ ಅನುದಾನ ಬಿಡುಗಡೆ ಮಾಡಬೇಕು, ಮೀನುಗಾರಿಕೆ, ಕೆಎಸ್ಸಾರ್ಟಿಸಿ, ಬಿಎಂಟಿಸಿ ಗಳಿಗೆ ಅನ್ವಯ ವಾಗುವ ಡೀಸೆಲ್‌ ರಿಯಾಯಿತಿ ಸೌಲಭ್ಯ ಗಳನ್ನು ನಮ್ಮ ಸಂಸ್ಥೆಗೂ ವಿಸ್ತರಿಸಬೇಕು ಮುಂತಾದ ಹಲವಾರು ಬೇಡಿಕೆಗಳನ್ನು ಸರಕಾರದ ಮುಂದಿಟ್ಟು ಸಂಸ್ಥೆಯ ನೌಕರರು ಮುಷ್ಕರ ನಡೆಸುತ್ತಿದ್ದಾರೆ.

ಮಂಗಳವಾರ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸುಜಾತ ಕೃಷ್ಣಪ್ಪ ಸ್ಥಳಕ್ಕೆ ಭೇಟಿ ನೀಡಿ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತಂದು ಬಗೆಹರಿಸುವ ಬಗ್ಗೆ ಭರವಸೆ ನೀಡಿದರು. ಹರಿಹರಪುರದ ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತ ಪಡಿಸಿದರು.

ಜೆಡಿಎಸ್ ಮುಖಂಡ, ಎಚ್.ಜಿ.ವೆಂಕಟೇಶ್, ಜೆ.ಡಿ.ಎಸ್.ಕ್ಷೇತ್ರಾಧ್ಯಕ್ಷ ದಿವಾಕರ ಭಟ್, ಕಳಸಪ್ಪ, ಬದ್ರಿಯಾ ಮಹಮ್ಮದ್ ಮೊದಲಾದವರು ಭೇಟಿ ನೀಡಿ ಬೆಂಬಲದ ಮಾತನ್ನಾಡಿದರು. ಸ್ಥಳೀಯ ಉದ್ಯಮಿಗಳಾದ ಶತೀಶ್ ಚಂದ್ರ ಶೆಟ್ಟಿ ಅದ್ದಡ, ಸಂಪತ್  ಹಾಗು ಕಾಂಗ್ರೆಸ್ ಮುಖಂಡ ಅಸಗೋಡು ನಾಗೇಶ್ ಸಾಹಿತಿ ಚಂದ್ರ ಕಲಾ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸಾರಿಗೆ ಸಚಿವ ಲಕ್ಷಣ ಸವದಿಯವರಿಂದ ಕರೆ ಬಂದಿದ್ದು, ಸಂಸ್ಥೆಯ ಅಧ್ಯಕ್ಷರು ಹಾಗು ಕೆಲವು ನಿರ್ದೇಶಕರು ಇಂದು ಬೆಳಗ್ಗೆ ಬೆಂಗಳೂರಿಗೆ ತೆರಳಿದ್ದು ಮುಖ್ಯಮಂತ್ರಿಯೊಂದಿಗೆ ಇಂದು ಸಂಜೆ ಈ ವಿಷಯದಲ್ಲಿ ಚರ್ಚೆ ನಡೆಸಲಿದ್ದಾರೆ ಎಂದು ಸಹಕಾರ ಸಾರಿಗೆ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥ್ ತಿಳಿಸಿದ್ದಾರೆ.

Full View

Writer - ಝುಬೈರ್ ಅಹ್ಮದ್ ಕೊಪ್ಪ

contributor

Editor - ಝುಬೈರ್ ಅಹ್ಮದ್ ಕೊಪ್ಪ

contributor

Similar News