ಮತದಾರರ ಪಟ್ಟಿಯಲ್ಲಿ ಶಿಕ್ಷಕೇತರ ಸಿಬ್ಬಂದಿಯ ಅಕ್ರಮ ನೋಂದಣಿ: ಸರಕಾರ, ಚು.ಆಯೋಗಕ್ಕೆ ಹೈಕೋರ್ಟ್ ನೋಟಿಸ್

Update: 2020-02-19 18:32 GMT

ಬೆಂಗಳೂರು, ಫೆ.19: ಅಕ್ರಮವಾಗಿ ಶಿಕ್ಷಕೇತರ ಸಿಬ್ಬಂದಿಯನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿದ ವಿಚಾರದಲ್ಲಿ ಮತದಾರರ ಪಟ್ಟಿಗೆ ತಡೆ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರ ಹಾಗೂ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿದೆ.

ಅಲ್ಲದೆ, ಐಎಎಸ್ ಅಧಿಕಾರಿ ಹರ್ಷ ಗುಪ್ತರನ್ನು ಹುದ್ದೆಯಲ್ಲಿ ಮುಂದುವರೆಸಲು ಮನವಿ ಮಾಡಲಾಗಿದೆ. ಈ ಕುರಿತು ನ್ಯೂಸ್ ಇಂಡಿಯಾ ವೋಟರ್ಸ್‌ ಪೋರಂ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಪಿಜಿಎಂ ಪಾಟೀಲ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆ ವೇಳೆ ಶಿಕ್ಷಕೇತರ ಸಿಬ್ಬಂದಿಯನ್ನು ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಲಾಗಿತ್ತು. ಈ ಅಕ್ರಮವನ್ನು ತಡೆಯಲು ಮುಂದಾಗಿದ್ದ ಚುನಾವಣಾ ನೋಂದಣಿ ಅಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ಹರ್ಷ ಗುಪ್ತರನ್ನೂ ವರ್ಗಾವಣೆ ಮಾಡಲಾಗಿದೆ. ಹೀಗಾಗಿ, ಹರ್ಷ ಗುಪ್ತರನ್ನು ಇದೇ ಹುದ್ದೆಯಲ್ಲಿ ಮುಂದುವರೆಸಬೇಕು ಹಾಗೂ ಮತದಾರರ ಪಟ್ಟಿಗೆ ತಡೆ ನೀಡಬೇಕೆಂದು ಪೀಠಕ್ಕೆ ತಿಳಿಸಿದರು. ಕೆಲಕಾಲ ವಕೀಲರ ವಾದ ಆಲಿಸಿದ ನ್ಯಾಯಪೀಠವು ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News