ರಸ್ತೆ ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ: ಸಂಚಾರ ವ್ಯತ್ಯಯ ಇಲ್ಲ

Update: 2020-02-19 18:38 GMT

ಬೆಂಗಳೂರು, ಫೆ.19: ತಮ್ಮನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಗುರುವಾರ(ಫೆ.20) ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಆದರೆ, ಸರಕಾರಿ ಬಸ್ಸುಗಳ ಸೇವೆಯಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ ಎಂದು ತಿಳಿದುಬಂದಿದೆ.

ಬೆಂಗಳೂರಿನ ಸ್ವಾತಂತ್ರ ಉದ್ಯಾನ ಮೈದಾನದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಮೂಲಭೂತ ಹಕ್ಕುಗಳ ವಿಚಾರ ವೇದಿಕೆ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಯಲಿದ್ದು, ನಾಲ್ಕು ಸಾರಿಗೆ ನಿಗಮಗಳ ನೌಕರರು ಭಾರೀ ಸಂಖ್ಯೆಯಲ್ಲಿ ಜಮಾಯಿಸಲಿದ್ದಾರೆ. ಜತೆಗೆ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಹಾಗೂ ಲಿಂಗಾಯತ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

ಇನ್ನು ಬಸ್ ಕಾರ್ಯಾಚರಣೆಗೆ ತೊಂದರೆಯಾಗದಂತೆ ಈ ಉಪವಾಸ ಸತ್ಯಾಗ್ರಹ ನಡೆಸಲು ನೌಕರರು ನಿರ್ಧರಿಸಿದ್ದಾರೆ. ಒಂದು ವೇಳೆ ನೌಕರರ ಸ್ವಯಂ ಪ್ರೇರಿತರಾಗಿ ಕರ್ತವ್ಯಕ್ಕೆ ಗೈರಾಗಿ ಹೋರಾಟದಲ್ಲಿ ಪಾಲ್ಗೊಂಡರೆ ಬಸ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಸಿಬ್ಬಂದಿಗೆ ಇಲ್ಲ ರಜೆ

ಉಪವಾಸ ಸತ್ಯಾಗ್ರಹದ ಹಿನ್ನೆಲೆಯಲ್ಲಿ ಬಸ್ ಸೇವೆಯಲ್ಲಿ ಯಾವುದೇ ರೀತಿಯಲ್ಲಿ ತೊಂದರೆ ಉಂಟಾಗದಂತೆ ಕೆಎಸ್ಸಾರ್ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ ತುರ್ತು ರಜೆ ಹೊರತುಪಡಿಸಿ ಸಾಮಾನ್ಯ ರಜೆ ಮಂಜೂರು ಮಾಡದಂತೆ ಅಧಿಕಾರಿಗಳು ಆದೇಶಿಸಿದ್ದು, ಫೆ.20ರಂದು ಕರ್ತವ್ಯಕ್ಕೆ ಗೈರಾಗುವ ನೌಕರರಿಗೆ ವೇತನ ಕಡಿತ ಮಾಡುವುದಾಗಿ ಎಚ್ಚರಿಸಿದ್ದಾರೆ.

ಶಾಂತಿಯುತವಾಗಿ ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ. ಸಾರ್ವಜನಿಕರ ಹಿತೃದಷ್ಟಿಯಿಂದ ಬಸ್ ಸೇವೆ ಮುಂದುವರಿಯಲಿದೆ. ಬಜೆಟ್‌ನಲ್ಲಿ ರಾಜ್ಯ ಸರಕಾರ ಸಾರಿಗೆ ನೌಕರರನ್ನು ಸರಕಾರಿ ನೌಕರರಾಗಿ ಘೋಷಿಸಬೇಕೆಂಬುದು ನೌಕರರ ಒಕ್ಕೊರಲ ಬೇಡಿಕೆಯಾಗಿದೆ. ಬಿಜೆಟ್‌ನಲ್ಲಿ ನಮ್ಮ ಬೇಡಿಕೆ ಈಡೇರಿಸದಿದ್ದರೆ ನೌಕರರ ಸಂಘಟನೆಗಳು ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲಿದ್ದೇವೆ.

-ಆನಂದ್, ಜಂಟಿ ಕಾರ್ಯದರ್ಶಿ, ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಶನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News