ಈ ಲಿಂಗಾಯಿತ ಮಠಕ್ಕೆ ಮುಸ್ಲಿಂ ಸ್ವಾಮೀಜಿ!

Update: 2020-02-20 04:26 GMT
ಚಿತ್ರ ಕೃಪೆ: Times of India

ಹುಬ್ಬಳ್ಳಿ, ಫೆ.20: ಗದಗ ಜಿಲ್ಲೆಯ ಲಿಂಗಾಯತ ಮಠವೊಂದು ಮುಸ್ಲಿಂ ಯುವಕರೊಬ್ಬರನ್ನು ಮುಂದಿನ ಸ್ವಾಮೀಜಿಯಾಗಿ ಆಯ್ಕೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದೆ.

ದಿವಾನ್ ಶರೀಫ್ ರಹಿಮಾನ್‌ ಸಾಬ್ ಮುಲ್ಲಾ (33) ಅವರನ್ನು ಫೆಬ್ರವರಿ 26ರಂದು ಶಿಷ್ಯನನ್ನಾಗಿ ಸ್ವೀಕರಿಸಲು ಸಿದ್ಧತೆ ನಡೆದಿದೆ. ಬಾಲ್ಯದಿಂದಲೂ ಬಸವಣ್ಣನ ತತ್ವಗಳ ಬಗ್ಗೆ ಅಪಾರ ಒಲವು ಹೊಂದಿದ್ದ ಶರೀಫ್ ಸಾಮಾಜಿಕ ನ್ಯಾಯ ಹಾಗೂ ಸಾಮರಸ್ಯದ ತಮ್ಮ ಕಲ್ಪನೆಯನ್ನು ಸಾಕಾರಗೊಳಿಸಲಿದ್ದಾರೆ ಎಂದು ಶ್ರೀಮಠ ಹೇಳಿದೆ.

ಶರೀಫ್ ಅವರು ಅಸೂಟಿ ಗ್ರಾಮದ ಮುರುಘರಾಜೇಂಧ್ರ ಕೊರನೇಶ್ವರ ಶಾಂತಿಧಾಮ ಮಠದ ಸ್ವಾಮೀಜಿಯಾಗಲಿದ್ದಾರೆ. ಇದು 350 ವರ್ಷ ಇತಿಹಾಸದ ಗುಲ್ಬರ್ಗ ಜಿಲ್ಲೆ ಖಜೂರಿ ಗ್ರಾಮದ ಕೊರನೇಶ್ವರ ಸಂಸ್ಥಾನಮಠಕ್ಕೆ ಸಂಬಂಧಿಸಿದ ಮಠವಾಗಿದೆ. ಚಿತ್ರದುರ್ಗದ ಮುರುಘರಾಜೇಂದ್ರ ಮಠದ 361 ಮಠಗಳ ಪೈಕಿ ಇದು ಸೇರುತ್ತದೆ. "ಬಸವತತ್ವಗಳು ಸಾರ್ವತ್ರಿಕ ಹಾಗೂ ಜಾತಿ- ಧರ್ಮಗಳನ್ನು ಮೀರಿ ಅನುಯಾಯಿಗಳನ್ನು ನಾವು ಹೊಂದಿದ್ದೇವೆ. ತಮ್ಮ ಬೋಧನೆ ಮೂಲಕ 12ನೇ ಶತಮಾನದಲ್ಲೇ ಸಾಮಾಜಿಕ ನ್ಯಾಯ ಮತ್ತು ಸಾಮರಸ್ಯದ ಕನಸು ಕಂಡಿದ್ದರು. ಮಠ ತನ್ನ ಬಾಗಿಲನ್ನು ಎಲ್ಲರಿಗೆ ಮುಕ್ತವಾಗಿಸಿದೆ" ಎಂದು ಖಜೂರಿ ಮಠದ ಮರುಘರಾಜೇಂದ್ರ ಕೊರನೇಶ್ವರ ಶಿವಯೋಗಿ ಸ್ವಾಮೀಜಿ ಹೇಳಿದ್ದಾರೆ.

ಅಸೂಟಿ ಗ್ರಾಮದಲ್ಲಿ ಶಿವಯೋಗಿಗಳ ಪ್ರವಚನದಿಂದ ಪ್ರೇರಿತರಾಗಿದ್ದ ಶರೀಫ್ ತಂದೆ ರಹೀಮ್‌ ಸಾಬ್ ಮುಲ್ಲಾ, ಗ್ರಾಮದಲ್ಲಿ ಮಠ ಸ್ಥಾಪನೆಗೆ ಎರಡು ಎಕರೆ ಜಮೀನು ನೀಡಿದ್ದರು. 2-3 ವರ್ಷಗಳಿಂದ ಅಸೂಟಿ ಮಠ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ಮಠದ ಆವರಣ ಕೆಲಸ ಪ್ರಗತಿಯಲ್ಲಿದೆ ಎಂದು ವಿವರಿಸಿದ್ದಾರೆ.

"ಬಸವತತ್ವಕ್ಕೆ ಅರ್ಪಿಸಿಕೊಂಡಿರುವ ಶರೀಫ್ ಅದಕ್ಕೆ ಅನುಗುಣವಾಗಿ ಜೀವನ ಸಾಗಿಸುತ್ತಿದ್ದಾರೆ. ಅವರ ತಂದೆ ಕೂಡಾ ಕಟ್ಟಾ ಅನುಯಾಯಿಯಾಗಿದ್ದು, ಲಿಂಗದೀಕ್ಷೆ ಪಡೆದಿದ್ದರು. 2019ರ ನವೆಂಬರ್ 10ರಂದು ಶರೀಫ್ ದೀಕ್ಷೆ ಪಡೆದಿದ್ದರು. ಮೂರು ವರ್ಷಗಳಿಂದ ಲಿಂಗಾಯಿತ ಧರ್ಮ ಹಾಗೂ ಬಸವತತ್ವದ ಬಗ್ಗೆ ಅವರಿಗೆ ತರಬೇತಿ ನೀಡಲಾಗಿದೆ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News