ಜ್ವಲಂತ ಸಮಸ್ಯೆ ಪರಿಹರಿಸದೇ ಹಬ್ಬ ಮಾಡುವುದು ಸಂತ್ರಸ್ಥರಿಗೆ ಮಾಡುವ ಅವಮಾನ: ಡಿ.ಆರ್.ದುಗ್ಗಪ್ಪಗೌಡ

Update: 2020-02-20 11:33 GMT

ಚಿಕ್ಕಮಗಳೂರು, ಫೆ.20: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಅಗಸ್ಟ್‍ನಲ್ಲಿ ಸಂಭವಿಸಿದ ಅತಿವೃಷ್ಟಿಯಿಂದಾಗಿ ಭಾರೀ ಪ್ರಮಾಣದಲ್ಲಿ ಪ್ರಾಕೃತಿಕ ಅವಘಡಗಳು ಸಂಭವಿಸಿವೆ. ಇದರಿಂದಾಗಿ ಸಾವಿರಾರು ರೈತರು, ಕಾರ್ಮಿಕರೂ ಸೇರಿದಂತೆ ಸಾರ್ವಜನಿಕರು ಸಂತ್ರಸ್ಥರಾಗಿದ್ದಾರೆ. ಈ ಸಂತ್ರಸ್ಥರಿಗೆ ಜಿಲ್ಲಾಡಳಿತ ಮತ್ತು ಸರಕಾರ ಇದುವರೆಗೆ ಸಮರ್ಪಕವಾಗಿ ಪರಿಹಾರಧನವನ್ನು ವಿತರಣೆ ಮಾಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಂತ್ರಸ್ಥರ ನೋವು, ಸಮಸ್ಯೆಗೆ ಸ್ಪಂದಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಜನರ ಕೊಟ್ಯಂತರ ರೂ. ತೆರಿಗೆ ಹಣದಲ್ಲಿ ಹಬ್ಬ ಮಾಡಲು ಹೊರಟಿರುವುದು ನಾಚಿಕೆಗೇಡು. ಇದನ್ನು ರೈತ ಸಂಘ ಖಂಡಿಸುತ್ತದೆ ಎಂದು ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಡಿ.ಆರ್.ದುಗ್ಗಪ್ಪಗೌಡ ಹೇಳಿದ್ದಾರೆ.

ಗುರುವಾರ ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಕಾಳಜಿ ವಹಿಸದ ಜಿಲ್ಲಾ ಉಸ್ತುವಾರಿ ಸಚಿವ ಸರಕಾರದ 4.5 ಕೋಟಿ ರೂ. ವೆಚ್ಚದಲ್ಲಿ ಚಿಕ್ಕಮಗಳೂರು ಹಬ್ಬ ಮಾಡಲು ಹೊರಟಿದ್ದಾರೆ. ಈ ಸಂಬಂಧ ವಿರೋಧಗಳು ಕೇಳಿ ಬಂದಾಗ ಸಚಿವರು ಹೇಳಿಕೆ ನೀಡಿ, ಯಾವುದೇ ವಿರೋಧ ಬಂದರೂ ಸರಿ, ಅದನ್ನು ಎದುರಿಸಿಯೇ ಹಬ್ಬ ಮಾಡೇ ಮಾಡುತ್ತೇವೆ ಎಂದು ಉಡಾಫೆಯಾಗಿ ಹೇಳಿರುವುದು ಅನಾಗರಿಕ ಸಂಸ್ಕೃತಿಯಾಗಿದೆ ಎಂದು ದುಗ್ಗಪ್ಪಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಅತಿವೃಷ್ಟಿಯಿಂದಾಗಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ಜಮೀನು, ಬೆಳೆ ಸೇರಿದಂತೆ ಮನೆಗಳನ್ನು ಕಳೆದುಕೊಂಡು ಸಂತ್ರಸ್ಥರಾಗಿದ್ದಾರೆ. ಈ ಸಂತ್ರಸ್ಥರಿಗೆ ಜಮೀನು, ನಿವೇಶನ ನೀಡಲಾಗುವುದು. ಸಂತ್ರಸ್ಥರಿಗೆ ಜಮೀನು, ನಿವೇಶನ ನೀಡಲು ಜಾಗ ಗುರುತಿಸಲಾಗಿದೆ, ಮನೆ ನಿರ್ಮಾಣಕ್ಕೆ ಸೂಕ್ತ ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಉಸ್ತುವಾರಿ ಸಚಿವ ಸಿ.ಟಿ.ರವಿ ಪದೇ ಪದೇ ಹೇಳುತ್ತಿದ್ದಾರೆ. ಆದರೆ ವಾಸ್ತವವಾಗಿ ಜಿಲ್ಲಾಡಳಿತ ಇದುವರೆಗೂ ಇದಕ್ಕಾಗಿ ಎಲ್ಲೂ ಜಮೀನನ್ನು ಗರುತಿಸಿಯೇ ಇಲ್ಲ. ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಹೇಳಿದ್ದು, ಕೇವಲ 1 ಲಕ್ಷ ರೂ. ಮಾತ್ರ ನೀಡಲಾಗಿದೆ. ಅತಿವೃಷ್ಟಿ ವೇಳೆ ನೆರೆ ನೀರಿನಿಂದ ಕೊಚ್ಚಿ ಹೋದ ರಸ್ತೆ, ಸೇತುವೆಗಳ ಮರು ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ ಎಂದು ಸಚಿವರು ಹಾಗೂ ಜಿಲ್ಲಾಡಳಿತ ಹೇಳುತ್ತಿದ್ದಾರಾದರೂ ಈ ಕಾಮಗಾರಿಗೂ ಎಲ್ಲೂ ನಡೆಯುತ್ತಿಲ್ಲ. ಅತಿವೃಷ್ಟಿ ಸಂಭವಿಸಿ 7 ತಿಂಗಳು ಕಳೆದಿದ್ದರೂ ಸಂತ್ರಸ್ಥರಿಗೆ ಸರಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ಅವರು ಆರೋಪಿಸಿದರು.

ಮೂಡಿಗೆರೆ ತಾಲೂಕಿನ ಕಳಸ ಹಾಗೂ ಬಾಳೂರು ಹೋಬಳಿಗಳ ವ್ಯಾಪ್ತಿಯಲ್ಲಿ ಅತಿವೃಷ್ಟಿ ವೇಳೆ ಭೂ ಕುಸಿತ ಸಂಭವಿಸಿ ಕೆಲ ಗ್ರಾಮಗಳು ನಾಶವಾಗಿವೆ. ಇಂತಹ ಗ್ರಾಮಗಳಲ್ಲಿ ಮತ್ತೆ ಜನವಸತಿಗೆ ಜಾಗ ಯೋಗ್ಯವಲ್ಲ ಎಂದು ಸರಕಾರದ ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ ವರದಿ ನೀಡಿದ್ದಾರೆ. ಈ ವರದಿ ಅನ್ವಯ ಅಂತಹ ಗ್ರಾಮಗಳ ಜನರಿಗೆ ಬೇರೆಡೆ ನಿವೇಶನ ಜಮೀನು ನೀಡಿದರೆ ಅಲ್ಲಿ ವಾಸ ಇರುವುದಾಗಿ ಈ ಗ್ರಾಮಗಳ ಸಂತ್ರಸ್ಥರು ಸರಕಾರಕ್ಕೆ ಪ್ರಮಾಣಪತ್ರ ನೀಡಿದ್ದಾರೆ. ಆದರೆ ಜಿಲ್ಲಾಡಳಿತ ಜಮೀನು ಕಳೆದುಕೊಂಡವರಿಗೆ ಬೇರೆಡೆ ಜಮೀನು ನೀಡಲು ಭೂಮಿಯನ್ನೇ ಗುರುತು ಮಾಡಿಲ್ಲ ಎಂದು ಆರೋಪಿಸಿದ ದುಗ್ಗಪ್ಪಗೌಡ, ಜಮೀನು ಕಳೆದುಕೊಂಡು ಸಂತ್ರಸ್ಥರಾದ ರೈತರಿಗೆ ಬೇರೆಡೆ ಕೇವಲ ನಿವೇಶನ ನೀಡುವುದಾಗಿ ಜಿಲ್ಲಾಡಳಿತ ಈಗ ಹೇಳುತ್ತಿದ್ದು, ಇದರಿಂದಾಗಿ ಜಮೀನು ಕಳೆದುಕೊಂಡ ರೈತರು ಜಮೀನೂ ಇಲ್ಲದೇ, ಜಮೀನು ಇಲ್ಲದೇ ಆತಂಕಕ್ಕೊಳಗಾಗಿದ್ದಾರೆ. ರೈತರ ಸಮಸ್ಯೆಯನ್ನು ಆಲಿಸಬೇಕಾದ ಜಿಲ್ಲಾಡಳಿತ ಸಂತ್ರಸ್ಥರನ್ನು ನಿರ್ಲಕ್ಷಿಸಿ ಜಿಲ್ಲಾ ಉತ್ಸವದ ತಯಾರಿಯಲ್ಲೇ ಕಾಲ ಕಳೆಯುತ್ತಿದೆ ಆರೋಪಿಸಿದರು.

ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳ ತಾಲೂಕು ಕಚೇರಿಗಳು ಭ್ರಷ್ಟಾಚಾರದ ಕೂಪಗಳಾಗಿವೆ. ವಿದ್ಯುತ್ ಸಮಸ್ಯೆ ತೀವ್ರಗೊಂಡಿದೆ. ಮೆಸ್ಕಾಂ ಅಧಿಕಾರಿಗಳು ರೈತರ ವಿದ್ಯುತ್ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಕಾಡು ಪ್ರಾಣಿಗಳ ಹಾವಳಿಗೆ ಪರಿಹಾರವೇ ಇಲ್ಲದಂತಾಗಿದೆ. ಡೀಮ್ಡ್ ಅರಣ್ಯ ಸಮಸ್ಯೆ ಮುಗಿಯದ ಕತೆಯಾಗಿದೆ. ಜಿಲ್ಲೆಯ ಬಯಲು ಪ್ರದೇಶಗಳಿಗೆ ನೀರಾವರಿ ಯೋಜನೆಗಳ ಜಾರಿ ಕನಸಾಗಿ ಉಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಈ ಸಮಸ್ಯೆಗಳಿಗೆ ಸರಕಾರದ ಅನುದಾನ ಉಪಯೋಗಿಸದೇ ಜನರ ತೆರಿಗೆ ಹಣವನ್ನು ದುಂದು ವೆಚ್ಚ ಮಾಡಲು ಹೊರಟಿರುವುದು ರೈತರು, ಕಾರ್ಮಿಕರು, ಅತಿವೃಷ್ಟಿ ಸಂತ್ರಸ್ಥರಿಗೆ ಮಾಡುವ ಅವಮಾನವಾಗಿದೆ ಎಂದು ದುಗ್ಗಪ್ಪಗೌಡ ವಿಷಾದ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತಸಂಘ ಹಸಿರುಸೇನೆಯ ಮುಖಂಡರಾದ ದಯಾಕರ್, ಮೋಹನ್, ಮಂಜೇಗೌಡ, ನಿರಂಜನ್‍ಮೂರ್ತಿ ಉಪಸ್ಥಿತರಿದ್ದರು.

ಡೀಮ್ಡ್ ಅರಣ್ಯ ಸಮಸ್ಯೆ ಪರಿಹಾರಕ್ಕೆ ಈ ಹಿಂದೆ ನ್ಯಾಯಾಲಯವೇ ಅವಕಾಶ ನೀಡಿತ್ತು. ಆದರೆ ಕಂದಾಯಾಧಿಕಾರಿಗಳ ಬೇಜವಾಬ್ದಾರಿಯಿಂದ ಈ ಸಮಸ್ಯೆ ಜಟಿಲವಾಗಿದೆ. ಸದ್ಯ ಡೀಮ್ಡ್ ಅರಣ್ಯ ಸಮಸ್ಯೆಯಿಂದಾಗಿ ನಿವೇಶನ ಹಾಗೂ ಅತಿವೃಷ್ಟಿಯಿಂದ ಹಾನಿಯಾದ ಜಮೀನಿಗೆ ಬದಲಿ ಜಮೀನು ನೀಡಲು ಜಾಗ ಸಿಗುತ್ತಿಲ್ಲ. ಈ ಹಿಂದೆ ಡೀಮ್ಡ್ ಅರಣ್ಯ ಪ್ರದೇಶಗಳ ಜಾಗವನ್ನು ಮರುಪರಿಶೀಲನೆ ಮಾಡಿ ಅರಣ್ಯ ಅಲ್ಲದ ಜಾಗವನ್ನು ಉಳಿಸಿಕೊಂಡು ಅರಣ್ಯ ಪ್ರದೇಶವನ್ನು ಮಾತ್ರ ಡೀಮ್ಡ್ ವ್ಯಾಪ್ತಿಗೆ ನೀಡಲು ನ್ಯಾಯಾಲಯವೇ ಸೂಚನೆ ನೀಡಿತ್ತು. ಆದರೆ ಜಿಲ್ಲಾಡಳಿತ ಈ ಸಂಬಂಧ ಯಾವುದೇ ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ಮಾಡಿದ ಪರಿಣಾಮ ನಿವೇಶನ, ಜಮೀನು ವಿತರಣೆಗೆ ಕಂದಾಯ ಜಾಗ ಸಿಗದಂತಾಗಿದೆ.
- ಡಿ.ಆರ್.ದುಗ್ಗಪ್ಪಗೌಡ, ಜಿಲ್ಲಾಧ್ಯಕ್ಷ, ರೈತಸಂಘ, ಹಸಿರುಸೇನೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News