‘ಕರ್ನಾಟಕ್, ಕರ್ನಾಟಕ್’ ಎಂದ ಸಚಿವ ಪ್ರಭು ಚೌವ್ಹಾಣ್‌ಗೆ ಸಿದ್ದರಾಮಯ್ಯ ಹೇಳಿದ್ದೇನು?

Update: 2020-02-20 15:19 GMT

ಬೆಂಗಳೂರು, ಫೆ. 20: ‘ನಿಮಗೆ ಕನ್ನಡ ಸರಿಯಾಗಿ ಬರುತ್ತಾ?’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಅವರನ್ನು ವಿಧಾನಸಭೆಯಲ್ಲಿ ಪ್ರಶ್ನಿಸಿದ ಪ್ರಸಂಗ ನಡೆಯಿತು.

ಗುರುವಾರ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡುತ್ತಿದ್ದ ಸಿದ್ದರಾಮಯ್ಯ, ‘ಬೀದರ್ ಜಿಲ್ಲೆಯ ಔರಾದ್ ವಿಧಾನಸಭಾ ಕ್ಷೇತ್ರದಿಂದ ಬಂದಿರುವ ನೀವು, ಮುಂಬೈ ಮೂಲದಿಂದ ಬಂದವರು. ನಿಮಗೆ ಕನ್ನಡ ಸರಿಯಾಗಿ ಬರುತ್ತಾ?’ ಎಂದು ಕೇಳಿದರು.

ಈ ವೇಳೆ ಎದ್ದು ನಿಂತ ಸಚಿವ ಪ್ರಭು ಚೌವ್ಹಾಣ್, ‘ನೀವು ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಿರಿ, ನಾನು ಬೀದರ್ ಜಿಲ್ಲಾ, ಔರಾದ್ ಕ್ಷೇತ್ರದವನು. ಕರ್ನಾಟಕ್‌ದವನು’ ಎಂದು ಸಮಜಾಯಿಷಿ ನೀಡಲು ಮುಂದಾದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ‘ಕರ್ನಾಟಕ್, ಕರ್ನಾಟಕ್’ ಎಂದು ನಾವು ಹೇಳುವುದಿಲ್ಲ. ಕರ್ನಾಟಕ ಎನ್ನಬೇಕು.

ಈ ಹಿಂದೆ ನಾನು ಸಿಎಂ ಆಗಿದ್ದ ವೇಳೆ ಬೀದರ್‌ಗೆ ಹೋಗಿದ್ದೆ. ಪ್ರಗತಿ ಪರಿಶೀಲನೆ ಸಭೆಯಲ್ಲಿ ಪ್ರಭು ಚೌವ್ಹಾಣ್ ಅವರು ಕನ್ನಡ, ಹಿಂದಿ ಮತ್ತು ಬಂಜಾರ ಮೂರು ಭಾಷೆ ಮಿಕ್ಸ್ ಮಾಡಿ ಮಾತನಾಡುತ್ತಿದ್ದರು. ಹೀಗಾಗಿ ನಾನು ಅವರಿಗೆ ಕನ್ನಡ ಬರುತ್ತಾ ಎಂದು ಕೇಳಿದೆ. ಅವರನ್ನು ಹೀಯ್ಯಾಳಿಸುವ ಉದ್ದೇಶ ಖಂಡಿತ ಇಲ್ಲ ಎಂದು ಸ್ಪಷ್ಟಣೆ ನೀಡಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್‌ಕುಮಾರ್, ‘ಈ ಹಿಂದೆ ಒಮ್ಮೆ ಲೋಕಸಭೆಯಲ್ಲಿ ಸದಸ್ಯರೊಬ್ಬರು ಸಂಸತ್‌ನಲ್ಲಿ ಒಂದು ಗಂಟೆ ಇಂಗ್ಲಿಷ್‌ನಲ್ಲಿ ಮಾತನಾಡಿದ್ದರು. ಭಾಷಣದ ಬಳಿಕ ಮಧು ದಂಡವತೆಯವರು ಭಾಷಣದ ಇಂಗ್ಲಿಷ್ ಭಾಷಾಂತರ ಬೇಕೆಂದು ಕೇಳಿದರು ಎಂದು ನೆನಪು ಮಾಡಿದ್ದರಿಂದ ಸದನದಲ್ಲಿ ನಗೆ ಅಲೆ ಸೃಷ್ಟಿಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News