ಮುಂಬೈ ಶಹರವನ್ನು ತೆರೆದಿಡುವ ಮಿಂಚು

Update: 2020-02-20 18:30 GMT

‘ಮುಂಬಯಿ ಮಿಂಚು’ ಎನ್ನುವ ಪದದ ಅರ್ಥ ನಮಗಾಗಬೇಕಾದರೆ ನಾವು ಜಯಂತ್ ಕಾಯ್ಕಿಣಿ ಕತೆಗಳ ಓದುಗರಾಗಿರಬೇಕು. ಇಂತಹ ಸಹಸ್ರಾರು ಮಿಂಚುಗಳ ಗೊಂಚಲುಗಳಿಂದ ಅವರ ಕತೆಗಳು ಬೆಳಗುತ್ತಿರುತ್ತವೆ. ಶ್ರೀನಿವಾಸ ಜೋಕಟ್ಟೆ ಅವರು ಇದೀಗ ‘ಮುಂಬಯಿ ಮಿಂಚು’ ಹೆಸರಿನ ಮೂಲಕವೇ ಮುಂಬೈಯ ಹೊಳಹುಗಳನ್ನು ಓದುಗರ ಮುಂದಿಟ್ಟಿದ್ದಾರೆ. ಹಲವು ದಶಕಗಳಿಂದ ಮುಂಬೈಯಲ್ಲಿ ಬದುಕುತ್ತಿರುವ ಜೋಕಟ್ಟೆಯವರು ಮುಂಬೈಯನ್ನು ಬಿಟ್ಟರೂ, ಮುಂಬೈ ಅವರನ್ನು ಬಿಡಲಿಲ್ಲ. ಮುಂಬೈಯ ಮೋಹನ ಮುರಳಿ ಕರೆಯೇ ಅಂತಹದು. ಇಂತಹ ಮುಂಬೈಯಲ್ಲಿ ಕಂಡುಂಡ ಸಂಗತಿಗಳನ್ನು ಬೃಹತ್ ಕೃತಿಯಾಗಿಸಿದ್ದಾರೆ ಜೋಕಟ್ಟೆ. ‘ಹೆಮ್ಮರದಂತಹ ಕನಸು ಕಟ್ಟಿ ಪತ್ರಿಕಾವೃತ್ತಿಗೆ ಬಂದವರು, ದೊಡ್ಡ ಹುದ್ದೆ ಸಿಕ್ಕಿದ್ದೇ ಕ್ರಿಯಾಶೀಲತೆ ಪೂರಾ ಕಳೆದುಕೊಂಡು ಡೆಸ್ಕ್ ಗೆ ಒರಗಿದವರು ಸಾಕಷ್ಟಿದ್ದಾರೆ. ಆದರೆ ಸದಾ ಅಭದ್ರತೆಯಲ್ಲೇ ದಶಕಗಳನ್ನು ಕಳೆದಿರುವ ಅಲೆಮಾರಿ ಪತ್ರಕರ್ತ’ ಜೋಕಟ್ಟೆಗೆ ಮುಂಬೈ ಅತ್ಯಂತ ಸಹಜವಾಗಿ ಒಲಿದಿದೆ. ಇಡೀ ಮುಂಬೈಯ ಬದುಕೇ ಒಂದು ರೀತಿಯಲ್ಲಿ ಅಭದ್ರತೆಯನ್ನು ಹುಟ್ಟಿಸುವಂತಹದು. ಇದೇ ಸಂದರ್ಭದಲ್ಲಿ ನಿರಾಶೆಗೂ ಮುಂಬೈಯಲ್ಲಿ ಎಡೆಯಿಲ್ಲ. ಆದುದರಿಂದಲೇ ‘‘ಮುಂಬೈಯಲ್ಲಿ ಬದುಕಲಾರದವನು, ಜಗತ್ತಿನ ಎಲ್ಲೂ ಬದುಕಲಾರ’’ ಎನ್ನುವ ಮಾತಿದೆ.

 ಈ ಕೃತಿಯಲ್ಲಿ ತನಗೆ ದಕ್ಕಿದ ಮಹಾನಗರವನ್ನು ಲೇಖಕರು ಕಟ್ಟಿಕೊಟ್ಟಿದ್ದಾರೆ. ಆರಂಭದಲ್ಲಿ ಮುಂಬೈಯ ಇತಿಹಾಸ, ಕನ್ನಡದೊಂದಿಗೆ ಅದಕ್ಕಿರುವ ಕುತೂಹಲಕಾರಿ ನಂಟನ್ನು ವಿವರಿಸುತ್ತಾರೆ. ಅದಾದ ಬಳಿಕವೇ ಮುಂಬೈಯ ಋಣಾತ್ಮಕ, ಧನಾತ್ಮಕವಾಗಿರುವ ಒಂದೊಂದೇ ವೈಶಿಷ್ಟಗಳನ್ನು ಪರಿಚಯಿಸುತ್ತಾ ಹೋಗುತ್ತಾರೆ. ಮುಂಬೈಯಲ್ಲಿ ಟ್ರಾಮ್ ಯುಗ, ಮುಂಬೈಯ ಲೋಕಲ್ ರೈಲುಗಳು, ಸ್ಲಮ್ ಕ್ಷೇತ್ರ ಧಾರಾವಿ, ದಕ್ಷಿಣ ಮುಂಬೈಯ ವೈಭವ, ವಾಟ್ಸನ್ ಹೊಟೇಲ್, ಮುಂಬೈಯ ಅಸ್ಮಿತೆಗಳಾಗಿದ್ದ ಸಿನೆಮಾ ಟಾಕೀಸ್‌ಗಳು, ಮುಂಬೈಯ ಆರ್ಥಿಕತೆಗೆ ಅಫೀಮಿನ ಕೊಡುಗೆ, ಪಶ್ಚಿಮ ನಲಂದಾ ಕನ್ಹೇರಿ ಗುಹೆಗಳು, ಸಂಜಯ್‌ಗಾಂಧಿ ನೇಶನಲ್ ಪಾರ್ಕ್, ಅತಿ ದೊಡ್ಡ ಫುಟ್‌ಪಾತ್ ಬಜಾರ್ ‘ಫ್ಯಾಶನ್ ಸ್ಟ್ರೀಟ್’, ಮುಂಬೈಯ ಕುಖ್ಯಾತ ಚೋರ್‌ಬಝಾರ್, ಪಾರ್ಸಿಗಳ ಪ್ರಪಂಚ, ವಿಲ್ಸನ್ ಕಾಲೇಜ್ ಹೀಗೆ ಮೊಗೆದಷ್ಟೂ ಮುಗಿಯದ ವಿವರಗಳನ್ನು ಕೊಡುತ್ತಲೇ ಹೋಗುತ್ತಾರೆ. ಮುಂಬೈಯನ್ನು ಕಣ್ಣಲ್ಲಿ ಕಾಣದವರಿಗೂ ಮುಂಬೈಯನ್ನು ಕುಳಿತಲ್ಲೇ ಸುತ್ತಾಡಿಸುತ್ತದೆ ಈ ಕೃತಿ. ಮುಂಬೈಯನ್ನು ನೋಡುವುದಕ್ಕೆ ಮುನ್ನ ಈ ಕೃತಿಯನ್ನು ಓದಿಕೊಂಡು ಪ್ರವಾಸ ಹೊರಟರೆ ಆ ಶಹರವನ್ನು ಸುಲಭವಾಗಿ ತನ್ನದಾಗಿಸಿಕೊಳ್ಳಬಹುದು. ಇಲ್ಲವಾದರೆ, ಒಂದು ಗಲ್ಲಿ ಸುತ್ತಾಡುವಷ್ಟರಲ್ಲೇ ಸುಸ್ತಾಗಬೇಕಾದೀತು. ಕೃತಿ ಕೇವಲ ಮುಂಬೈಯ ಮೇಲ್ಮೈ ಸಂಗತಿಗಳನ್ನು ಮಾತ್ರವಲ್ಲ, ಅದರ ಒಳಗಿನ ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಕುರಿತಂತೆಯೂ ತೆರೆದಿಡುತ್ತದೆ.

ಶ್ರೀರಾಮ ಪ್ರಕಾಶನ ಮಂಡ್ಯ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 368. ಮುಖಬೆಲೆ 320 ರೂಪಾಯಿ. ಆಸಕ್ತರು 09869394694 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News