ಸಂಘಪರಿವಾರದಿಂದ ಮನೆ ಮೇಲೆ ಕಲ್ಲು ತೂರಾಟ: ಅಮೂಲ್ಯ ತಂದೆ ಆರೋಪ

Update: 2020-02-20 18:40 GMT

ಚಿಕ್ಕಮಗಳೂರು, ಫೆ.20: 'ಪಾಕಿಸ್ತಾನ ಝಿಂದಾಬಾದ್' ಘೋಷಣೆ ಕೂಗಿದ ಅಮೂಲ್ಯ ಲಿಯೋನ ಅವರ ಹೆತ್ತವರ ಮನೆಗೆ ಸಂಘಪರಿವಾರ ಸಂಘಟನೆಗಳ ಕಾರ್ಯಕರ್ತರು ಗುರುವಾರ ರಾತ್ರಿ ದಾಳಿ ನಡೆಸಿದ್ದು, ಮನೆಗೆ ಕಲ್ಲು ತೂರಾಟ ನಡೆಸಿದ್ದು, ಮನೆಯ ಕಿಟಕಿ ಗಾಜುಗಳು ಪುಡಿಯಾಗಿವೆ ಎಂದು ಅಮೂಲ್ಯ ತಂದೆ ವಾಜೀ ಆರೋಪಿಸಿದ್ದಾರೆ.

ಗುರುವಾರ ರಾತ್ರಿ ಸುಮಾರು 25 ಜನರ ತಂಡ ಕೊಪ್ಪ ತಾಲೂಕಿನ ಶಿವಪುರ ಗ್ರಾಮದಲ್ಲಿರುವ ವಾಜೀ ಅವರ ಮನೆ ಬಳಿ ಬಂದು ಮನೆಗೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ವಾಜೀ ಆರೋಪಿಸಿದ್ದಾರೆ.

ಸದ್ಯ ತನಗೆ ಗ್ರಾಮದಲ್ಲಿ ಬದುಕಲು ಸಾಧ್ಯವಾಗುತ್ತಿಲ್ಲ. ಸಂಘಪರಿವಾರ ಸಂಘಟನೆಗಳ ಕಾರ್ಯಕರ್ತರು ಮನೆಯ ಬಳಿ ಬಂದು ಹೆದರಿಸಿದ್ದಾರೆ. ಮಗಳು 'ಪಾಕಿಸ್ತಾನ ಝಿಂದಾಬಾದ್' ಘೋಷಣೆ ಕೂಗಿದ ಸಂಬಂಧ ವಿಡಿಯೋವೊಂದನ್ನು ಮಾಡಿಕೊಂಡಿದ್ದಾರೆ. ಈ ವೇಳೆ ನಾನು ಕೊಪ್ಪ ಪೊಲೀಸರಿಗೆ ಮೊಬೈಲ್ ಮೂಲಕ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಬರುವ ಹೊತ್ತಿಗೆ ಕಾರ್ಯಕರ್ತರು ಮನೆಯಿಂದ ಹೊರಹೋಗಿದ್ದಾರೆ ಎಂದು ವಾಜೀ ಹೇಳಿದ್ದಾರೆ.

ಪೊಲೀಸರು ಮನೆಯಲ್ಲಿ ಆಗಿರುವ ಹಾನಿಯನ್ನು ಪರಿಶೀಲಿಸಿದ್ದು, ಮನೆಗೆ ಹಾನಿ ಮಾಡಿದ ಕೆಲವರನ್ನು ಪೊಲೀಸರು ಗುರುತಿಸಿದ್ದಾರೆ. ಆದರೆ ಅವರ ಬಗ್ಗೆ ಪೊಲೀಸರು ನಮ್ಮ ಬಳಿ ಯಾವುದೇ ಮಾಹಿತಿಯನ್ನು ಕೇಳಿಲ್ಲ. ಘಟನೆ ಸಂಬಂದ ಪೊಲೀಸರಿಗೆ ಎಲ್ಲ ಮಾಹಿತಿ ನೀಡುತ್ತಿದ್ದೇನೆ. ಸದ್ಯ ಈ ಘಟನೆಯಿಂದಾಗಿ ನನ್ನ ಕುಟುಂಬಕ್ಕೆ ಇಲ್ಲಿ ಬದುಕಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಅವರು 'ವಾರ್ತಾಭಾರತಿ'ಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News