ಪರಾಜಿತ ಅಭ್ಯರ್ಥಿಗೆ ಚುನಾವಣಾ ವೆಚ್ಚದ ದಾಖಲೆ ಸಲ್ಲಿಸಲು ಹೈಕೋರ್ಟ್ ಸೂಚನೆ

Update: 2020-02-20 18:53 GMT

ಬೆಂಗಳೂರು, ಫೆ.20: ರಾಜರಾಜೇಶ್ವರಿನಗರ ಕ್ಷೇತ್ರದ ಅನರ್ಹ ಶಾಸಕ ಮುನಿರತ್ನ ಆಯ್ಕೆ ಅಸಿಂಧು ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಪರಾಜಿತ ಅಭ್ಯರ್ಥಿ ಮುನಿರಾಜುಗೌಡಗೆ ನಿಮ್ಮ ಚುನಾವಣಾ ವೆಚ್ಚದ ದಾಖಲೆಗಳನ್ನು ಸಲ್ಲಿಸಿ ಎಂದು ಹೈಕೋರ್ಟ್ ಸೂಚನೆ ನೀಡಿದೆ.

ಈ ಕುರಿತು ಮುನಿರಾಜುಗೌಡ ಸಲ್ಲಿಸಿದ್ದ ಚುನಾವಣೆ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಮುಜಿರಾಜುಗೌಡಗೆ ನಿಮ್ಮ ಚುನಾವಣಾ ವೆಚ್ಚದ ದಾಖಲೆಗಳನ್ನು ಸಲ್ಲಿಸಬೇಕೆಂದು ಸೂಚಿಸಿದೆ.

ಮುನಿರತ್ನ ಪರ ವಾದಿಸಿದ ವಕೀಲರು, ಮುನಿರಾಜುಗೌಡನಿಗೆ ತಮಗೆ ಒಟ್ಟು ಎಷ್ಟು ಮತಗಳು ಬೀಳಲಿದ್ದವು ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ. ಚುನಾವಣಾ ಅಕ್ರಮ ಕೇಳಿ ಬಂದ ಹಿನ್ನೆಲೆಯಲ್ಲಿ ಎಷ್ಟು ಮತದಾರರು ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ಹೇಳಿಲ್ಲ. ಹೀಗಾಗಿ, ಅರ್ಜಿಯನ್ನು ವಜಾಗೊಳಿಸಬೇಕೆಂದು ಪೀಠಕ್ಕೆ ಮನವಿ ಮಾಡಿದ್ದರು.

2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿರತ್ನ ಅವರು ರಾಜರಾಜೇಶ್ವರಿ ನಗರದಲ್ಲಿ ನಕಲಿ ವೋಟರ್ ಐಡಿ ಕಾರ್ಡ್‌ಗಳನ್ನು ಮುದ್ರಿಸಿ ಹಂಚುತ್ತಿದ್ದಾರೆ ಎಂದು ಮುನಿರತ್ನ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಆರೋಪಿಸಿದ್ದರು. ಈ ಬಗ್ಗೆ ಅವರು ಚುನಾವಣೆ ಆಯೋಗಕ್ಕೂ ದೂರು ನೀಡಿದ್ದರು. ಇದನ್ನು ಪರಿಗಣಿಸಿದ್ದ ಆಯೋಗ ಕೆಲಕಾಲ ಕ್ಷೇತ್ರದ ಚುನಾವಣೆಯನ್ನೂ ಮುಂದೂಡಿತ್ತು. ಬಳಿಕ ಮುನಿರತ್ನ ಅವರು ಗೆಲುವು ಸಾಧಿಸಿದ್ದರು.

ಇದೀಗ ಮುನಿರತ್ನ ಬಿಜೆಪಿಗೆ ಸೇರ್ಪಡೆಯಾಗಿದ್ದು, ಪರಾಜಿತ ಅಭ್ಯರ್ಥಿ ಮುನಿರಾಜು ಗೌಡ ಚುನಾವಣಾ ತಕರಾರು ಅರ್ಜಿ ವಿಚಾರಣೆ ಕೋರ್ಟ್‌ನಲ್ಲಿ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News