‘ಉತ್ತರ ಕರ್ನಾಟಕಕ್ಕೆ ಕೊಡುಗೆ’: ಶ್ವೇತಪತ್ರ ಹೊರಡಿಸುವಂತೆ ಎಚ್‌ಡಿಕೆ ಆಗ್ರಹ

Update: 2020-02-20 19:09 GMT

ಬೆಂಗಳೂರು, ಫೆ.20: ಉತ್ತರ ಕರ್ನಾಟಕಕ್ಕೆ ಸ್ವಾತಂತ್ರ ಬಂದ ನಂತರ ಯಾವ ಯಾವ ಮುಖ್ಯಮಂತ್ರಿಗಳು ಏನೆಲ್ಲ ಕೊಡುಗೆಗಳು ನೀಡಿದ್ದಾರೆ ಎಂಬುದರ ಬಗ್ಗೆ ಸದನದಲ್ಲಿ ಸರಕಾರ ಶ್ವೇತಪತ್ರ ಹೊರಡಿಸಲಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.

ಗುರುವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ನಡೆಯುತ್ತಿದ್ದ ಚರ್ಚೆ ವೇಳೆ ಜೆಡಿಎಸ್ ಸದಸ್ಯ ಎಚ್.ಡಿ.ರೇವಣ್ಣ ಮಾತನಾಡುವಾಗ ಮಧ್ಯಪ್ರವೇಶಿಸಿ ಅವರು ಮಾತನಾಡಿದರು.

ಬಿಜೆಪಿ ಸದಸ್ಯರಾದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಎ.ಎಸ್.ಪಾಟೀಲ್, ರಾಜ್ಯ ಸರಕಾರದ ಅನುದಾನದಲ್ಲಿ ಸಿಂಹ ಪಾಲು ದಕ್ಷಿಣ ಕರ್ನಾಟಕದ ಭಾಗಕ್ಕೆ ಹೋಗುತ್ತಿದೆ. ಉತ್ತರ ಕರ್ನಾಟಕದ ಭಾಗಕ್ಕೂ ಹೆಚ್ಚಿನ ಅನುದಾನ ನೀಡಿ ಎಂದರು.

ಈ ವೇಳೆ ಆಕ್ರೋಶಗೊಂಡ ಕುಮಾರಸ್ವಾಮಿ, ಇಲ್ಲಿ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಎಂದು ವಿಭಜನೆ ಮಾಡುವುದು ಬೇಡ. ಈ ಸದನದಲ್ಲಿ ಸಮಗ್ರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚೆಯಾಗಬೇಕಿದೆ. ಉತ್ತರ ಕರ್ನಾಟಕವನ್ನು ಬಿಜೆಪಿಯವರಿಗೆ ಗುತ್ತಿಗೆ ನೀಡಿಲ್ಲ ಎಂದರು.

ನನ್ನ ಸರಕಾರದಲ್ಲಿ ಜಾರಿಗೆ ತಂದ ಸಾಲಮನ್ನಾ ಯೋಜನೆಯಿಂದ ಬೆಳಗಾವಿ ಜಿಲ್ಲೆಯೊಂದರಲ್ಲಿ 1500 ಕೋಟಿ ರೂ.ಗಳ ಸಹಾಯವಾಗಿದೆ. ನೀರಾವರಿ ಯೋಜನೆಗಳಿಗೆ ಉತ್ತರ ಕರ್ನಾಟಕ ಭಾಗಕ್ಕೆ ಎಷ್ಟು ಪ್ರಮಾಣದಲ್ಲಿ ಅನುದಾನ ಹಂಚಿಕೆಯಾಗಿದೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳಿ ಎಂದು ಬಿಜೆಪಿ ಸದಸ್ಯರಿಗೆ ಅವರು ತಿರುಗೇಟು ನೀಡಿದರು.

ಯಾವ ಯಾವ ಮುಖ್ಯಮಂತ್ರಿಗಳ ಅಧಿಕಾರಾವಧಿಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಎಷ್ಟು ಪ್ರಮಾಣದಲ್ಲಿ ಅನುದಾನ ಹಂಚಿಕೆಯಾಗಿದೆ, ಅಭಿವೃದ್ಧಿ ಕಾರ್ಯಗಳನ್ನು ಹೇಗೆ ತೆಗೆದುಕೊಳ್ಳಲಾಗಿದೆ ಎಂಬುದರ ಕುರಿತು ಸದನದಲ್ಲಿ ಸರಕಾರ ಶ್ವೇತಪತ್ರ ಹೊರಡಿಸಲಿ ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News