ಸೋತವರು ಪರಿಷತ್ತಿಗೆ ಬರುತ್ತಿದ್ದಾರೆ: ಬಸವರಾಜ ಹೊರಟ್ಟಿ

Update: 2020-02-20 19:12 GMT

ಬೆಂಗಳೂರು, ಫೆ. 20: ರಾಜ್ಯದಲ್ಲಿ ಮೌಲ್ಯಾಧಾರಿತ ರಾಜಕಾರಣ ಕುಸಿಯುತ್ತಿದ್ದು, ಸೋತವರು ವಿಧಾನಪರಿಷತ್ತಿಗೆ ಬರುತ್ತಿರುವುದು ವಿಷಾದನೀಯ ಎಂದು ಪರಿಷತ್ತಿನ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

ಗುರುವಾರ ವಿಧಾನಪರಿಷತ್ತಿನಲ್ಲಿ ಊಟದ ವಿರಾಮದ ಬಳಿಕ ನಡೆದ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿದ ಅವರು, ಈ ಹಿಂದೆ ಪರಿಷತ್ತಿಗೆ ಕಲೆ, ಸಾಹಿತ್ಯ ಸೇರಿ ಇನ್ನಿತರೆ ಕ್ಷೇತ್ರಗಳ ಹಿನ್ನೆಲೆಯುಳ್ಳವರು ಬರುತ್ತಿದ್ದರು. ಆದರೆ, ಈಗ ಸೋತವರು ಬರುತ್ತಿದ್ದಾರೆ ಎಂದರು.

ಈ ವೇಳೆ ಎದ್ದುನಿಂತ ಸಚಿವ ಡಾ.ಕೆ.ಸುಧಾಕರ್, ಸದನ ರಾಜಕೀಯ ಪ್ರೇರಿತ ಹೌಸ್ ಆಗಿದೆ. ಎಲ್ಲ ಪಕ್ಷಗಳು ಈ ಕುರಿತು ಗಂಭೀರ ಚಿಂತನೆ ನಡೆಸಬೇಕು ಎನ್ನುತ್ತಿದ್ದಂತೆಯೇ, ಐವಾನ್ ಡಿಸೋಜ ಎಂಟಿಬಿ ನಾಗರಾಜ್ ಹೆಸರು ಪ್ರಸ್ತಾಪ ಮಾಡಿದರು. ಇದಕ್ಕೆ ಸುಧಾಕರ್, ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲಲಾಗದೇ ಇದ್ದ ನೀವು ಇಲ್ಲಿಗೆ ಬಂದಿದ್ದೀರಿ ಎಂದು ತಿವಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷಗಳು ಕಡತದಿಂದ ಈ ಪದ ತೆಗೆಯುವಂತೆ ಒತ್ತಾಯಿಸಿದರು.

ಬಳಿಕ ಮಾತನಾಡಿದ ಹೊರಟ್ಟಿ, ಕರ್ನಾಟಕಕ್ಕೆ ಪಾರ್ದಾಪಣೆ ಮಾಡಿದ ಬಿಜೆಪಿ ಆಪರೇಷನ್ ಕಮಲದ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದೆ. ಮೊದಲ ಬಾರಿಗೆ 2 ಡಿಸಿಎಂ, ಅನಂತರ 3 ಡಿಸಿಎಂ ಮಾಡಿದ ಇತಿಹಾಸ ಬಿಜೆಪಿಗೆ ಇದೆ. ಮುಂದೆ 5 ಡಿಸಿಎಂ ಮಾಡದಿದ್ದಲ್ಲಿ, ಯಡಿಯೂರಪ್ಪ ಸರಕಾರ ಉಳಿಯಲ್ಲ. ಸರಕಾರ ರಚನೆಯಾಗಿ 6 ತಿಂಗಳು ಕಳೆದರೂ ಏನೊಂದು ಸಾಧನೆ ಮಾಡಿಲ್ಲ ಎಂದು ಟೀಕಿಸಿದರು.
ರಾಜ್ಯದಲ್ಲಿ ಕೆಲವೊಂದು ಸ್ವಾಮೀಜಿಗಳು ಮಠಗಳನ್ನು ಬಿಟ್ಟು, ವಿಧಾನಸೌಧ ಪ್ರವೇಶಿಸುವ ಆತುರದಲ್ಲಿದ್ದಾರೆ. ಇಂತಹವರನ್ನೇ ಮಂತ್ರಿ ಮಾಡಬೇಕು ಎಂದು ಬಹಿರಂಗವಾಗಿ ಬೆದರಿಕೆ ಹಾಕುತ್ತಾರೆ. ಸ್ವಾಮೀಜಿಗಳ ಮೇಲೆ ಅತಿಯಾದ ಪ್ರೀತಿ, ಸಡಿಲಿಕೆ ಬೇಡ ಎಂದು ಸಲಹೆ ನೀಡಿದರು.

ರಾಜ್ಯದಲ್ಲಿರುವ ನಿರುದ್ಯೋಗ ಸಮಸ್ಯೆ, ಶೈಕ್ಷಣಿಕ ಸಮಸ್ಯೆ, ರೈತರ ಸಾಲ ಮನ್ನಾ, ಮಹಿಷಿ ವರದಿ ಜಾರಿ, ಬೆಂಬಲ ಬೆಲೆ ಸೇರಿದಂತೆ ಜನಪರ ಕೆಲಸಗಳಲ್ಲಿ ತೊಡಗಿಕೊಳ್ಳಲು ಸರಕಾರ ಮುಂದಾಗಲಿ ಎಂದು ಬಸವರಾಜ ಹೊರಟ್ಟಿ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News