ತುಳು ಭಾಷೆಗೆ ರಾಜ್ಯದ ಮಾನ್ಯತೆ ಸಿಗಬೇಕು: ಉಮಾನಾಥ್ ಕೋಟ್ಯಾನ್

Update: 2020-02-20 19:14 GMT

ಬೆಂಗಳೂರು, ಫೆ.20: ರಾಜ್ಯದಲ್ಲಿ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಸುಮಾರು ಒಂದು ಕೋಟಿ ಜನ ತುಳು ಭಾಷೆಯನ್ನು ಮಾತನಾಡುತ್ತಿದ್ದು, ಇದಕ್ಕೆ ರಾಜ್ಯದ ಮಾನ್ಯತೆ ಕೊಟ್ಟು ಸಂವಿಧಾನದ ಪರಿಚ್ಛೇದ 8ರಲ್ಲಿ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಸದಸ್ಯ ಉಮಾನಾಥ್ ಕೋಟ್ಯಾನ್ ಆಗ್ರಹಿಸಿದರು.

ಗುರುವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತುಳು ಭಾಷೆಯನ್ನು ಸಂವಿಧಾನದ ಪರಿಚ್ಛೇದ 8ರಲ್ಲಿ ಸೇರಿಸಲು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಬೇಕು ಎಂದು ಒತ್ತಾಯಿಸಿದರು.

ಕಂಬಳ, ನಾಗಾರಾಧನೆ, ಭೂತಕೋಲ ಇವೆಲ್ಲವೂ ತುಳುನಾಡಿನ ಸಾಂಸ್ಕೃತಿಕ ಹಿರಿಮೆಯಾಗಿದೆ. ಈ ಹಿಂದೆ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ತುಳು ಅಕಾಡೆಮಿಯನ್ನು ಸ್ಥಾಪಿಸಿದರು. ನಾನು ಸಹ ಈ ಅಕಾಡೆಮಿಯ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ ಎಂದು ಅವರು ಹೇಳಿದರು.

ತುಳು ಅಕಾಡೆಮಿಯು ಸಾಂಸ್ಕೃತಿಕ ಚಟುವಟಿಕೆಗಳು, ಕ್ರೀಡೆ ಇವುಗಳ ಬಗ್ಗೆ ಗಮನ ಹರಿಸುತ್ತಿದೆ. ತುಳು ಭಾಷೆಗೆ ಮಾನ್ಯತೆ ದೊರಕಿಸಿಕೊಡಲು ನಾವೆಲ್ಲರೂ ಪ್ರಯತ್ನ ಪಡಬೇಕು ಎಂದು ಉಮಾನಾಥ್ ಕೋಟ್ಯಾನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News