ಗೆಜೆಟ್ ಅಧಿಸೂಚನೆ ಹೊರಡಿಸಲು ಸುಪ್ರೀಂ ಸಮ್ಮತಿ: ರಮೇಶ್ ಜಾರಕಿಹೊಳಿ

Update: 2020-02-20 19:17 GMT

ಬೆಂಗಳೂರು, ಫೆ.20: ಉತ್ತರ ಕರ್ನಾಟಕದ ಬಹುದಿನದ ಬೇಡಿಕೆಯಾದ ಮಹಾದಾಯಿ ಯೋಜನೆಯ ನದಿ ನೀರು ಹಂಚಿಕೆ ವಿಚಾರದಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸಲು ಸುಪ್ರೀಂಕೋರ್ಟ್ ಸಮ್ಮತಿಸಿರುವುದು ಸ್ವಾಗತಾರ್ಹ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ರಾಜ್ಯ ಸರಕಾರವು ಮಹಾದಾಯಿ ಯೋಜನೆ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸಲೇಬೇಕೆಂದು ಈ ಹಿಂದೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿತ್ತು. ಈ ಗೆಜೆಟ್ ಅಧಿಸೂಚನೆ ಹೊರಡಿಸಿದ ನಂತರ 2.18 ಟಿಎಂಸಿ ಬಂಡೂರ ತಿರುವು ನಾಲೆ ಮತ್ತು 1.72 ಟಿಎಂಸಿ ಕಳಸಾ ತಿರುವು ನಾಲೆಯಿಂದ(ಒಟ್ಟು 3.90 ಟಿಎಂಸಿ) ನೀರನ್ನು ಮಲಪ್ರಭಾ ನದಿಗೆ ಹರಿಸಲು ಸಕ್ಷಮ ಪ್ರಾಧಿಕಾರದ ಅನುಮೋದನೆಯನ್ನು ಪಡೆದು ಕಾಮಗಾರಿಗಳನ್ನು ಕೈಗೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

ಈ ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕೆ ಈಗಾಗಲೇ ಪರಿಸರ ಇಲಾಖೆಯಿಂದ ವಿನಾಯ್ತಿ ಪಡೆದಿದ್ದು, ಕೇಂದ್ರ ಜಲ ಆಯೋಗ ಮತ್ತು ಅರಣ್ಯ ಇಲಾಖೆಯ ಅನುಮೋದನೆ ಪಡೆಯಬೇಕಾಗಿದೆ. ಇದಲ್ಲದೇ, ಮಹಾದಾಯಿ ಜಲಾನಯನ ಪ್ರದೇಶದ ಕೆರೆಕಟ್ಟೆಗಳನ್ನು ತುಂಬಲು 1.50 ಟಿಎಂಸಿ ನೀರನ್ನು ಬಳಸುತ್ತೇವೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ವಿದ್ಯುಚ್ಛಕ್ತಿಯ ಉತ್ಪಾದನೆಗಾಗಿ 8.02 ಟಿಎಂಸಿ ನೀರನ್ನು ಕರ್ನಾಟಕ ವಿದ್ಯುಚ್ಛಕ್ತಿ ನಿಗಮಕ್ಕೆ ನೀಡುತ್ತೇವೆ ಮತ್ತು ಬಳಸಿದ ನೀರನ್ನು ಪುನಃ ನದಿಗೆ ಬಿಡುತ್ತೇವೆ. ಉತ್ತರ ಕರ್ನಾಟಕದ ರೈತರು ಕನಸು ನನಸಾಗುವ ಸಂದರ್ಭ ಈಗ ಕೂಡಿ ಬಂದಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ನಮ್ಮ ಪಾಲಿನ ಒಟ್ಟು 13.42 ಟಿಎಂಸಿ ನೀರನ್ನು ಸದ್ಭಳಕೆ ಮಾಡಿಕೊಳ್ಳಲು ಸುಪ್ರೀಂಕೋರ್ಟ್ ಅವಕಾಶ ಕಲ್ಪಿಸಿರುವುದು ಈ ಭಾಗದ ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ನೆರವಾಗುತ್ತದೆ. ದಾವೆಗಳ ಅಂತಿಮ ಇತ್ಯರ್ಥಕ್ಕಾಗಿ ವಿಚಾರಣೆಯನ್ನು ಜು.15ರಂದು ನಿಗದಿಪಡಿಸಲಾಗಿದೆ. ಅಂದು ನಾವು ಹೆಚ್ಚುವರಿ ದಾಖಲಾತಿಗಳನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿ ನಮ್ಮ ರಾಜ್ಯಕ್ಕೆ ನ್ಯಾಯಯುತವಾಗಿ ಸಿಗುವ ನೀರನ್ನು ಪಡೆದುಕೊಳ್ಳುತ್ತೇವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News