ದೇಶದ್ರೋಹ ಪ್ರಕರಣ ವಾಪಸ್ ಪಡೆಯುವಂತೆ ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷಗಳಿಂದ ಪ್ರತಿಭಟನೆ

Update: 2020-02-20 19:20 GMT

ಬೆಂಗಳೂರು, ಫೆ.20: ಬೀದರ್‌ನ ಶಾಹೀನ್ ಶಾಲೆಯ ಮುಖ್ಯ ಶಿಕ್ಷಕಿ ಮತ್ತು ಮಗುವಿನ ತಾಯಿಯ ಮೇಲೆ ಹಾಕಿರುವ ದೇಶದ್ರೋಹದ ಪ್ರಕರಣವನ್ನು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿ ವಿಧಾನ ಪರಿಷತ್ತಿನ ಪ್ರತಿಪಕ್ಷದ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಗುರುವಾರ ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಉತ್ತರ ನೀಡುತ್ತಾ, ಶಾಹೀನ್ ಶಾಲೆಯಲ್ಲಿ ಸರಕಾರದ ವಿರುದ್ಧ ನಾಟಕ ಮಾಡಲಾಗಿದೆ ಎಂದು ವ್ಯಕ್ತಿಯೋರ್ವರು ನೀಡಿದ ದೂರಿನ ಆಧಾರದಂತೆ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆಂದರು.

ಈ ವೇಳೆ ಮಧ್ಯ ಪ್ರವೇಶಿಸಿದ ಜೆಡಿಎಸ್ ಸದಸ್ಯ ಎಸ್.ಎಲ್.ಬೋಜೇಗೌಡ, ಶಾಲೆಗಳಲ್ಲಿ ಇಂತಹದೇ ನಾಟಕ ಮಾಡಿಯೆಂದು ಯಾವ ಪೋಷಕರೂ ಹೇಳುವುದಿಲ್ಲ. ಬೇಕಿದ್ದರೆ, ನಾಟಕಕ್ಕೆ ಬೇಕಾದ ಪರಿಕರಗಳನ್ನು ಕೊಡಿಸಬಹುದು. ಶಿಕ್ಷಕರು ಈ ಬಗ್ಗೆ ಹೇಳಿಕೊಟ್ಟಿರಬಹುದೆಂದರು. ಇದಕ್ಕೆ, ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ಪುಟ್ಟಣ್ಣ, ವೈ.ಎ.ನಾರಾಯಣಸ್ವಾಮಿ ಮತ್ತಿತರರು ತೀವ್ರ ಆಕ್ಷೇಪಿಸಿ, ನೀವು ಶಿಕ್ಷಕರ ಕ್ಷೇತ್ರದಿಂದಲೇ ಆಯ್ಕೆಯಾಗಿದ್ದೀರಿ ಎನ್ನುವುದನ್ನು ಮರೆಯಬೇಡಿ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್‌ನ ಅಬ್ದುಲ್ ಜಬ್ಬಾರ್, ಮಗು ಮಾಡಿದ ನಾಟಕಕ್ಕೆ ತಾಯಿ ಮೇಲೆ ದೂರು ದಾಖಲಿಸುವಂತೆ ಯಾವ ಕಾನೂನಿನಲ್ಲಿ ಹೇಳಿದೆ. ಒಂದು ವೇಳೆ ನಿಮ್ಮ (ಗೃಹಸಚಿವರು) ವಿರುದ್ಧ ದೂರು ಕೊಟ್ಟರೆ ದೇಶ ದ್ರೋಹದ ಪ್ರಕರಣ ದಾಖಲಿಸಬಹುದೇ ಎಂದು ಗೃಹ ಸಚಿವರನ್ನು ಪ್ರಶ್ನಿಸಿದರು.

ಇದಕ್ಕೆ ನಜೀರ್ ಅಹ್ಮದ್, ಸಿ.ಎಂ.ಇಬ್ರಾಹಿಂ ಧ್ವನಿಗೂಡಿಸಿ, ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ನೀಡಿದ್ದೀರಿ. ಈ ಬಗ್ಗೆ ನಾವು ಚಕಾರ ಎತ್ತಿಲ್ಲ. ಬೀದರ್ ಶಾಲೆಯ ಬಗ್ಗೆ ಪ್ರಕರಣವನ್ನು ಪುನರ್ ಪರಿಶೀಲಿಸುತ್ತೇವೆ ಎಂದು ಹೇಳಿ ಬಿಡಿ ಎಂದು ಒತ್ತಾಯಿಸಿದರು.

ಈ ನಡುವೆ ಪುಟ್ಟಣ್ಣ, ಶಿಕ್ಷಕರ ಮೇಲೆ ಆರೋಪ ಮಾಡಿರುವ ವಿಷಯವನ್ನು ಕಡತದಿಂದ ತೆಗೆಸಿ ಹಾಕಬೇಕು ಎಂದು ಹೇಳಿದ ಮಾತು ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿಗೂ ಕಾರಣವಾಯಿತು. ಆಗ ಮಧ್ಯ ಪ್ರವೇಶಿಸಿದ ಜೆಡಿಎಸ್‌ನ ಕೆ.ಟಿ.ಶ್ರೀಕಂಠೇಗೌಡ, ಬೋಜೇಗೌಡ ಸೇರಿದಂತೆ ಮತ್ತಿತರರು, ಬಿಜೆಪಿ ನೇತತ್ವದ ಸರಕಾರಕ್ಕೆ ನಿಜವಾಗಿಯೂ ಶಿಕ್ಷಕರ ಮೇಲೆ ಕಾಳಜಿ, ಕಳಕಳಿ ಇದ್ದರೆ ಮುಖ್ಯ ಶಿಕ್ಷಕಿ ಮತ್ತು ಮಗುವಿನ ತಾಯಿಯ ಮೇಲೆ ಹಾಕಿರುವ ಪ್ರಕರಣವನ್ನು ವಾಪಸ್ ಪಡೆಯಬೇಕೆಂದು ಸದನದ ಬಾವಿಗಳಿದು ಪ್ರತಿಭಟಿಸಿದರು.

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ನಾನು ಒಂದು ಶಾಲೆಯನ್ನು ತೆರೆದಿದ್ದೇನೆ. ಶಾಲೆಯಲ್ಲಿ ನಡೆಯುವ ವಿಷಯಗಳು ತಮ್ಮ ಗಮನಕ್ಕೆ ಬರುವುದಿಲ್ಲ. ಇಂತಹ ಸಂದರ್ಭದಲ್ಲಿ ತಮ್ಮ ವಿರುದ್ಧ ಪ್ರಕರಣ ದಾಖಲಿಸಿದರೆ ನಾನೇನು ಮಾಡುವುದು.
ಬೀದರ್ ಶಾಲೆಯಲ್ಲಿನ ಶಿಕ್ಷಕಿ ಮತ್ತು ತಾಯಿಯ ಮೇಲೆ ದೇಶದ್ರೋಹದ ಪ್ರಕರಣ ಹಾಕಿರುವುದು ಬಿಜೆಪಿ ಸರಕಾರದ ಭಂಡತನದ ಪರಮಾವಧಿ. ಶಾಲೆಯೊಂದರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿರುವುದು ದೇಶದಲ್ಲಿ ಇದೇ ಮೊದಲು. ಕೂಡಲೇಪ್ರಕರಣವನ್ನು ವಾಪಸ್ ಪಡೆಯಲಿ.
-ಎಸ್.ಆರ್.ಪಾಟೀಲ್, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News