ಸಮಾಜಕ್ಕೆ ಸಂಪತ್ತನ್ನು ಮರಳಿಸಿದ ಕಾಯಕ ಶರಣರು: ಪ್ರೊ.ಚಂದ್ರಶೇಖರ್

Update: 2020-02-21 13:00 GMT

ರಾಯಚೂರು, ಫೆ.21: ಕಾಯಕದಿಂದ ಗಳಿಸಿದ ಸಂಪತ್ತನ್ನು ದಾಸೋಹದ ಮೂಲಕ ಸಮಾಜಕ್ಕೆ ನೀಡುವ ಪರಿಕಲ್ಪನೆಯನ್ನು ಸಾರಿದ ಶರಣರಲ್ಲಿ ‘ಕಾಯಕ ಶರಣರು’ ಅತ್ಯಂತ ಮಹತ್ವ ಪಡೆದಿದ್ದಾರೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಶುಕ್ರವಾರ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾಯಕ ಶರಣರ ಜಯಂತಿಯಲ್ಲಿ ಅವರು ಉಪನ್ಯಾಸ ನೀಡಿದರು. ಸಂಪತ್ತನ್ನು ಗಳಿಸುವ ಎಲ್ಲ ಮಾರ್ಗಗಳು ನಮಗೆ ಗೊತ್ತಿದೆ. ಆದರೆ, ಧರ್ಮ ಮಾರ್ಗದಿಂದ ಕಾಯಕ ಮಾಡಿ ಸಂಪತ್ತನ್ನು ಗಳಿಸುವುದು ಯಾರಿಗೂ ತಿಳಿದಿಲ್ಲ. ಕಾಯಕ ಶರಣರು ಧರ್ಮ ಮಾರ್ಗದಿಂದ ಕೆಲಸ ಮಾಡಿ, ಅದರಿಂದ ಬಂದ ಸಂಪತ್ತನ್ನು ಸಮಾಜಕ್ಕೆ ವಾಪಸ್ಸು ನೀಡುತ್ತಿದ್ದರು ಎಂದು ಅವರು ಹೇಳಿದರು.

ಇವುಗಳಿಂದ ಬಡತನ ಮತ್ತು ಸೋಮಾರಿತನ ನಿರ್ಮೂಲವಾಗಿ, ಕಾಯಕ ಮತ್ತು ದಾಸೋಹ ಎಂಬ ಪರಿಕಲ್ಪನೆಗಳಿಂದ ವ್ಯಕ್ತಿ ಮುಕ್ತಿ ಹೊಂದುತ್ತಾನೆ. ಇದರೊಂದಿಗೆ ಜ್ಞಾನದ ದಾಸೋಹ ಎಲ್ಲ ದಾಸೋಹಗಳಿಗಿಂತ ಮುಖ್ಯವಾದದ್ದು ಎಂದು ಚಂದ್ರಶೇಖರ್ ತಿಳಿಸಿದರು.

12ನೆ ಶತಮಾನದಲ್ಲಿದ್ದ ತಾರತಮ್ಯ, ಅಸಮಾನತೆ, ಲಿಂಗ, ಜಾತಿ, ಭೇದ ಎಂಬ ಅನೇಕ ಸಮಾಜದ ಪಿಡುಗುಗಳ ವಿರುದ್ಧ ಹೋರಾಡಿದ ಮಹಾನ್ ಶರಣರು ಈ ಕಾಯಕ ಶರಣರಾಗಿದ್ದಾರೆ. ಅಲ್ಲದೇ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ಅವರು ಹೇಳಿದರು.

ಮಾದಾರ ಧೂಳಯ್ಯ ಎಂಬ ವಚನಕಾರರು ಕೆಳ ಜಾತಿಯಿಂದ ಹುಟ್ಟಿ ಬಂದು 12ನೆ ಶತಮಾನದಲ್ಲಿ ಅತ್ಯಂತ ಮಹತ್ವವನ್ನು ಪಡೆದುಕೊಂಡರು. ಇವರ ವಚನಗಳ ಆಧಾರಗಳು ಕಡಿಮೆ. ಆದರೆ ಇವರ ವಚನಗಳಲ್ಲಿ ಶಿವನನ್ನೆ ಪ್ರಶ್ನಿಸುವಂತಹ ವಚನಗಳನ್ನು ರಚಿಸಿದ್ದರು ಎಂದು ಚಂದ್ರಶೇಖರ್ ತಿಳಿಸಿದರು. ದೇಹ ಮತ್ತು ಪ್ರಾಣ ಸೂತಕಗಳ ಬಗ್ಗೆ ಸಾರಿ ಹೇಳಿದವರಲ್ಲಿ ಇವರೊಬ್ಬರು. ಅವಕಾಶಗಳು ನೀಡಿದರೆ ಯಾರು ಬೇಕಾದರೂ ಯಾವ ಸ್ಥಾನದಲ್ಲಾದರೂ ಹೋಗಬಹುದು ಎಂದು ಉರಿಲಿಂಗ ಪೆದ್ದಿಯವರಿಂದ ತಿಳಿದು ಬರುತ್ತದೆ. ಮೂಲತಃ ಇವರೊಬ್ಬ ಕಳ್ಳ ಆದರೆ ಪರಿವರ್ತನೆಯಿಂದ ಮಹಾಜ್ಞಾನಿಯಾಗುತ್ತಾನೆ ಎಂದು ಅವರು ಹೇಳಿದರು.

ವಚನಕಾರರಲ್ಲಿ ಶ್ರೇಷ್ಠನೆಂದೇ ಕರೆಯಲಾಗುವ ಶರಣ ಮಾದಾರ ಚನ್ನಯ್ಯ. ಅವರು ಜ್ಞಾನಿ ಮಾತ್ರವಲ್ಲದೇ ಮಹಾ ಪವಾಡ ಪುರುಷರಾಗಿದ್ದರು. ಇವರು ಅನೇಕ ವಚನಗಳನ್ನು ರಚಿಸಿ, ಸಮಾಜದ ಸಿಗ್ಗುಗಳನ್ನು ಅಳಿಸಲು ತಮ್ಮದೇ ಸೇವೆ ಸಲ್ಲಿಸಿದ್ದಾರೆ ಎಂದು ಚಂದ್ರಶೇಖರ್ ತಿಳಿಸಿದರು.

ಕಲ್ಯಾಣದ ಕ್ರಾಂತಿಯಲ್ಲಿ ಇಡೀ ಶರಣರ ಹೋರಾಟವಿದೆ. ಕಲ್ಯಾಣ ಕ್ರಾಂತಿ ಸಮಯದಲ್ಲಿ ತನ್ನದೇ ಸೈನ್ಯವನ್ನು ಕಟ್ಟಿಕೊಂಡು ಹೋರಾಡಿದ ಕಾಯಕ ಶರಣರಲ್ಲಿ ಸಮಗಾರ ಹರಳಯ್ಯ ಮಹತ್ವದ ಪಾತ್ರವನ್ನು ವಹಿಸುತ್ತಾರೆ ಎಂದು ಅವರು ಹೇಳಿದರು. ಬಸವ ಕಲ್ಯಾಣ ಎಂಬುದು ಒಬ್ಬರಿಂದ ಮಾತ್ರವಲ್ಲದೇ ಸಮಾಜದ ಕಟ್ಟ ಕಡೆಯಿಂದ ಬಂದ ಈ ಐದು ಜನ ಕಾಯಕರ ಪಾತ್ರ ಪ್ರಮುಖವಾಗುತ್ತದೆ. ಇವರ ಬಗ್ಗೆ ಬಸವಣ್ಣನವರು ಅನೇಕ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಚಂದ್ರಶೇಖರ್ ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಆದಿಜಾಂಬವ ಸೇವಾ ಟ್ರಸ್ಟ್ ಅಧ್ಯಕ್ಷ ರಾಮಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಮಂಗಳ ನಾಯಕ್, ಸಂಗೀತ ಶಿಕ್ಷಕಿ ಲಕ್ಷ್ಮಿರೆಡ್ಡಿ, ಸಾಹಿತಿಗಳು, ಹಿರಿಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News