ವುಹಾನ್ ನಗರದಿಂದ ಭಾರತೀಯರನ್ನು ತೆರವುಗೊಳಿಸುವ ಪ್ರಯತ್ನಕ್ಕೆ ಚೀನಾ ಅಡ್ಡಿ: ಆರೋಪ

Update: 2020-02-22 06:04 GMT

ಹೊಸದಿಲ್ಲಿ, ಫೆ.22: ಕೊರೋನಾ ವೈರಸ್‌ನಿಂದ ಬಾಧಿತವಾಗಿರುವ ವುಹಾನ್ ನಗರಕ್ಕೆ ಔಷಧಗಳ ಸರಬರಾಜಿಗೆ ಹಾಗೂ ಅಲ್ಲಿ ಉಳಿದುಕೊಂಡಿರುವ ಭಾರತೀಯರನ್ನು ತೆರವುಗೊಳಿಸಲು ಭಾರತದ ವಿಶೇಷ ವಿಮಾನಗಳಿಗೆ ಅನುಮತಿ ನೀಡುವುದಕ್ಕೆ ಸಂಬಂಧಿಸಿ ಚೀನಾ ‘ಉದ್ದೇಶಪೂರ್ವಕವಾಗಿ ವಿಳಂಬ ಧೋರಣೆ’ ತಾಳುತ್ತಿದೆ. ಚೀನಾದಲ್ಲಿರುವ ಭಾರತೀಯರನ್ನು ತೆರವುಗೊಳಿಸುವ ಪ್ರಯತ್ನಕ್ಕೆ ಬೀಜಿಂಗ್ ತಡೆಬೇಲಿ ಆಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ವುಹಾನ್ ನಗರಕ್ಕೆ ಔಷಧಗಳನ್ನು ಸರಬರಾಜು ಮಾಡಲು ಭಾರತೀಯ ವಾಯು ಪಡೆಗೆ ಸೇರಿದ ಸಿ-17 ಗ್ಲೋಬ್‌ಮಾಸ್ಟರ್ ವಿಮಾನಕ್ಕೆ ಅವಕಾಶ ನೀಡಲು ಯಾವುದೇ ವಿಳಂಬ ಧೋರಣೆ ತಳೆದಿಲ್ಲ ಎಂದು ಚೀನಾ ಶುಕ್ರವಾರ ಸ್ಪಷ್ಟಪಡಿಸಿದೆ.

‘‘ಫ್ರಾನ್ಸ್ ಸಹಿತ ಇತರ ದೇಶಗಳ ವಿಮಾನಗಳು ತಮ್ಮ ನಾಗರಿಕರನ್ನು ತೆರವುಗೊಳಿಸುವ ಕಾರ್ಯವನ್ನು ಮುಂದುವರಿಸುತ್ತಿವೆ. ಪರಿಹಾರ ನೀಡಲು ಬರುತ್ತಿರುವ ವಿಮಾನಗಳಿಗೆ ಚೀನಾ ಸರಕಾರ ಅನುಮತಿ ನೀಡುವುದಕ್ಕೆ ವಿಳಂಬ ಮಾಡುವುದರಿಂದ ಏನು ಲಾಭವಿದೆ ಎಂದಿರುವ ಬೀಜಿಂಗ್, ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂಬ ವರದಿಯನ್ನು ನಿರಾಕರಿಸಿದೆ.

 ಭಾರತೀಯ ವಾಯು ಸೇನೆಯ ಅತ್ಯಂತ ದೊಡ್ಡ ವಿಮಾನ ಸಿ-17 ಗ್ಲೋಬ್‌ಮಾಸ್ಟರ್‌ನಲ್ಲಿ ಔಷಧಗಳ ಸರಬರಾಜು ಮಾಡುವ ಮೂಲಕ ವುಹಾನ್‌ಗೆ ಕಳುಹಿಸಿಕೊಟ್ಟಿದ್ದೆವು. ಚೀನಾದಲ್ಲಿ ಸಿಲುಕಿಕೊಂಡಿರುವ ನಮ್ಮ ದೇಶದ ಹಾಗೂ ನೆರೆಯ ರಾಷ್ಟ್ರಗಳ ಪ್ರಜೆಗಳು ಮರಳಿ ಬಂದ ವಿಮಾನದಲ್ಲಿದ್ದರು ಎಂದು ಫೆಬ್ರವರಿ 17ರಂದು ಭಾರತ ಹೇಳಿದೆ.

ಈ ತಿಂಗಳಾರಂಭದಲ್ಲಿ ವುಹಾನ್‌ನಲ್ಲಿದ್ದ 647 ಭಾರತೀಯರು, ಮಾಲ್ಡೀವ್ಸ್‌ನ ಏಳು ಪ್ರಜೆಗಳನ್ನು ಏರ್ ಇಂಡಿಯಾದ ಎರಡು ವಿಶೇಷ ವಿಮಾನದಲ್ಲಿ ತೆರವುಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News