ಸುಳ್ಯದಲ್ಲಿ 65 ಎಕರೆ ಜಾಗದಲ್ಲಿ ಅರೆಭಾಷೆ ಸಾಂಸ್ಕೃತಿಕ ಕೇಂದ್ರ: ಡಿ.ವಿ.ಸದಾನಂದ ಗೌಡ

Update: 2020-02-23 16:55 GMT

ಮಡಿಕೇರಿ, ಫೆ.23: ಅರೆಭಾಷೆ ಸಂಸ್ಕೃತಿ, ಆಚಾರ-ವಿಚಾರ, ಕಲೆ, ಪರಂಪರೆ ಹಾಗೂ ಪದ್ಧತಿಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸುಳ್ಯ ಬಳಿ 65 ಎಕರೆ ಜಾಗದಲ್ಲಿ ಅರೆಭಾಷೆ ಸಾಂಸ್ಕೃತಿಕ ಕೇಂದ್ರವನ್ನು ದೊಡ್ಡ ಮಟ್ಟದಲ್ಲಿ ಆರಂಭಿಸಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ. 

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ, ಆಲೂರು ಸಿದ್ದಾಪುರ, ಸಂಗಯ್ಯನಪುರ ಅರೆಭಾಷೆ ಗೌಡ ಸಮಾಜ ಇವುಗಳ ಸಂಯುಕ್ತಾಶ್ರಯದಲ್ಲಿ ಎರಡನೇ ಅರೆಭಾಷೆ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅರೆಭಾಷೆ ಸಾಂಸ್ಕೃತಿಕ ಕೇಂದ್ರಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದ್ದು, 100 ಕೋಟಿ ರೂ. ವೆಚ್ಚದಲ್ಲಿ ಅರೆಭಾಷೆ ಸಾಂಸ್ಕೃತಿಕ ಕೇಂದ್ರ ತೆರೆಯಲು ಉದ್ದೇಶಿಸಲಾಗಿದ್ದು, ಇನ್ನು 5 ವರ್ಷದಲ್ಲಿ ಹಂತ ಹಂತವಾಗಿ ಕಾರ್ಯಗಳು ಆಗಲಿವೆ ಎಂದು ಅವರು ಹೇಳಿದರು.

ರಾಜ್ಯ, ರಾಷ್ಟ್ರದಲ್ಲಿ ಸಾವಿರಾರು ಭಾಷೆ, ಜನಾಂಗಗಳಿದ್ದು, ಅದರಲ್ಲಿ ಅರೆಭಾಷೆಯೂ ಒಂದಾಗಿದೆ. ಈ ಅರೆಭಾಷೆ ಸಂಸ್ಕೃತಿ ಮತ್ತು ಸಂಸ್ಕಾರವು ಸಮಾಜದ ಅಡಿಗಲ್ಲು ಆಗಿದೆ ಎಂದರು.

ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಸಣ್ಣ ಸಣ್ಣ ಭಾಷೆಗಳನ್ನು ಉಳಿಸಿ ಬೆಳೆಸಬೇಕಿದೆ. ಆ ನಿಟ್ಟಿನಲ್ಲಿ ಅೆಭಾಷೆಯನ್ನು ಉಳಿಸಬೇಕಿದೆ ಎಂದರು.
ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಅರೆಭಾಷೆ ಬಗ್ಗೆ ಅಭಿಮಾನವಿರಲಿ ಜೊತೆಗೆ ಸ್ವಾಭಿಮಾನವಿರಲಿ, ಆದರೆ ದುರಾಭಿಮಾನ ಬೇಡ. ಅರೆಭಾಷೆ ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಬೇಕು. ಅರೆಭಾಷೆಯ ಪ್ರಾಮುಖ್ಯತೆಯನ್ನು ಪ್ರತಿಯೊಬ್ಬೂ ತಿಳಿದುಕೊಳ್ಳಬೇಕು ಎಂದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಮಾತನಾಡಿ, ಅರೆಭಾಷಿಕರು ರಾಜಕೀಯ, ಸಾಮಾಜಿಕ ಮತ್ತಿತರ ಕ್ಷೇತ್ರದಲ್ಲಿ ಮುಖ್ಯವಾಹಿನಿಯಲ್ಲಿದ್ದು, ಕಲೆ, ಚಿತ್ರಕಲೆ, ಚಲನಚಿತ್ರ ಹೀಗೆ ಇನ್ನೂ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ನಿಕಟ ಪೂರ್ವ ಅಧ್ಯಕ್ಷ ಪಿ.ಸಿ.ಜಯರಾಮ, ಅರೆಭಾಷೆ ಸಾಹಿತ್ಯ ಸಮ್ಮೇಳನದ ನಿಕಟ ಪೂರ್ವ ಅಧ್ಯಕ್ಷ ಕೆ.ಆರ್.ಗಂಗಾಧರ, ಅರೆಭಾಷೆ ಎರಡನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಭವಾನಿ ಶಂಕರ ಹೊದ್ದೆಟ್ಟಿ ಮಾತನಾಡಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯಿಂದ ಹೊರತಲಾಗುತ್ತಿರುವ ಹಿಂಗಾರ ತ್ರೈಮಾಸಿಕ ಪುಸ್ತಕ, ಐಂಬರ, ಎನ್.ಜಿ.ಕಾವೇರಮ್ಮ ಬರೆದಿರುವ ಅರೆಭಾಷೆ ಕಾದಂಬರಿ ಪುಂಸ್ತ್ರೀ ಮೂಲ ಲೇಖಕರು ಡಾ. ಪ್ರಭಾಕರ ಶಿಶಿಲ, ಸಂಗೀತ ರವಿರಾಜ್ ಬರೆದಿರುವ ಕಲ್ಯಾಣ ಸ್ವಾಮಿ ಮೂಲ ಲೇಖಕರು ನಿರಂಜನ, ಕಟ್ರತನ ಲಲಿತಾ ಅಯ್ಯಣ್ಣ ಬರೆದಿರುವ ಅರೆಭಾಷೆ ಕಥಾ ಸಂಕಲನ ಅಪೂರ್ವ ಸಂಗಮ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. 

ಜಿಪಂ ಉಪಾಧ್ಯಕ್ಷ ಲೋಕೇಶ್ವರಿ ಗೋಪಾಲ್, ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಆಲೂರು ಸಿದ್ದಾಪುರ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ರಿಜಿಸ್ಟ್ರಾರ್ ಚಿನ್ನಸ್ವಾಮಿ, ಅಮ್ಮಾಜೀರ ಕಿರಣ್ ಹಾಗೂ ಇತರರಿದ್ದರು.

ಅಕಾಡಮಿ ಸದಸ್ಯ ಧನಂಜಯ ಅಗೋಳಿಕಜೆ ಅರು ಸ್ವಾಗತಿಸಿದರು. ಪಟ್ಟಡ ಲೀಲಾ ಕುಮಾರ್ ಮತ್ತು ಕಡ್ಲೇರ ತುಳಸಿ ಮೋಹನ್ ನಿರೂಪಿಸಿದರು. ಕಡ್ಯದ ಶ್ಯಾಮಲಾ ತಾರಣಯ್ಯ ಪ್ರಾರ್ಥಿಸಿದರು. ಡಾ.ಕೂಡಕಂಡಿ ದಯಾನಂದ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಕುಯ್ಯಮುಡಿ ಜಯಕುಮಾರ್ ವಂದಿಸಿದರು.

ದೇಶದಲ್ಲಿ ಸಾಕಷ್ಟು ಭಾಷೆ, ಉಪ ಭಾಷೆಗಳಿದ್ದು, ಅದರಲ್ಲಿ ಅರೆಭಾಷೆಯೂ ಒಂದಾಗಿದೆ. ಅಕಾಡಮಿ ಕಾರ್ಯ ಚಟುವಟಿಕೆಗಳು ಮುಂದಿನ ದಿನಗಳಲ್ಲಿ ಕಥೆ, ಕಾವ್ಯ, ನಾಟಕ ಮತ್ತಿತರ ಚಟುವಟಿಕೆಯಿಂದ ಕೂಡಿರುತ್ತವೆ. ಇದರಿಂದ ಸಾಹಿತ್ಯ ಸಮ್ಮೇಳನ ಸ್ಪೂರ್ತಿದಾಯಕವಾಗಿರುತ್ತದೆ. ಇದರಿಂದ ಭಾಷೆ ಉಳಿಸಿ ಬೆಳೆಸಲು ಸಾಧ್ಯ.
-ಲಕ್ಷ್ಮೀನಾರಾಯಣ ಕಜೆಗದ್ದೆ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಅಧ್ಯಕ್ಷ

ಕಲಾಸಕ್ತರ ಗಮನ ಸೆಳೆದ ವಸ್ತು ಪ್ರದರ್ಶನ

ಅರೆಭಾಷೆ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ ಮತ್ತು ವಿಚಾರ ಮಂಡನೆಗಳ ಜೊತೆಗೆ ವೇದಿಕೆಯ ಮತ್ತೊಂದು ಬದಿಯಲ್ಲಿ ಸ್ಥಾಪಿತವಾಗಿದ್ದ ವಸ್ತು ಪ್ರದರ್ಶನ ಮಳಿಗೆಗಳು ಸಾಹಿತಿಗಳು, ಮಕ್ಕಳು, ಸಾರ್ವಜನಿಕರನ್ನು ಸೂಜಿಗಲ್ಲಿನಂತೆ ಸೆಳೆಯುವಲ್ಲಿ ಯಶಸ್ವಿಯಾಯಿತು.

ಬಹುಮುಖ್ಯವಾಗಿ ವಿವಿಧ ರೀತಿಯ ಮೀನು ಹಿಡಿಯುವ ಸಾಧನಗಳಾದ ಕೊಂಜೊಳು, ಕುತ್ತುಕೂಳಿ ಮುಂತಾದವುಗಳು ಬಹು ವೈವಿಧ್ಯತೆಯಿಂದ ಕೂಡಿದ್ದವು. ಮೀನು ಕೊಯ್ಯುವ ಹಳೆಯ ಕಾಲದ ಕತ್ತಿ, ಕೊರಂಬೆ, ಪುತ್ತರಿ ಪಟ್ಟೆ, ಓನಲೆ, ಪರೆ, ಮಣ್ಣಿನ ಹೂಜಿ, ಮೊರ, ಮರಾಯಿ, ನೊಗ-ನೇಗಿಲುಗಳು ನೋಡುಗರನ್ನು ಆಕರ್ಷಿಸಿದವು.ಆಧುನಿಕತೆಯ ಪರಿವಿಲ್ಲದ ಕಾಲದಲ್ಲಿ ಜಾಣ್ಮೆಯಿಂದ ಬಿದಿರು, ಕಬ್ಬಿಣ, ತಾಮ್ರ ಮತ್ತು ಮಣ್ಣಿನಿಂದ ಹಿರಿಯರು ಕ್ರಿಯಾತ್ಮಕವಾಗಿ ರಚಿಸಿದ ವಸ್ತುಗಳು ಮಕ್ಕಳ ಮನಸ್ಸಿಗೆ ಮುದ ನೀಡಿದವು.

ಒಟ್ಟಾರೆ ಅರೆಭಾಷೆ ಸಾಹಿತ್ಯ ಸಮ್ಮೇಳನವು ತನ್ನ ಭಾಷಾ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ ಜೊತೆಗೆ ಪುರಾತನ ವಸ್ತುಗಳ ಬಗ್ಗೆ ಮಾಹಿತಿ, ಪುಸ್ತಕ ಪ್ರದರ್ಶನಗಳೊಂದಿಗೆ ಕಲಾಸಕ್ತರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News