ಶೀಘ್ರದಲ್ಲೇ ರವಿ ಪೂಜಾರಿಯನ್ನು ಬೆಂಗಳೂರಿಗೆ ಕರೆತರುತ್ತೇವೆ: ಗೃಹ ಸಚಿವ ಬೊಮ್ಮಾಯಿ

Update: 2020-02-23 17:16 GMT

ಮೈಸೂರು, ಫೆ.23: ಪಾಕಿಸ್ತಾನದ ಪರ ಘೋಷಣೆ ಕೂಗಿರುವುದು ಷಡ್ಯಂತ್ರದ ಒಂದು ಭಾಗ. ಅಮೂಲ್ಯಳ ತೀವ್ರ ವಿಚಾರಣೆ ನಡೆಯುತ್ತಿದೆ. ಅವಳ ಹಿಂದೆ ಯಾರಿದ್ದಾರೆ, ಯಾವ ಸಂಘಟನೆ ಇದೆ ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಎನ್‍ಯು ನಿಂದ ಹಿಡಿದು ಅಪ್ಜಲ್ ಗುರು ಗಲ್ಲಿಗೇರಿಸುವವರೆಗೂ ಇಂತಹ ಷಡ್ಯಂತ್ರಗಳು ನಡೆದಿವೆ. ಅಪ್ಜಲ್ ಗುರು ಗಲ್ಲಿಗೇರಿಸುವ ವಿಚಾರದಲ್ಲಿ ಕನ್ಹಯ್ಯಾ ಕುಮಾರ್ ಕೂಡ ವಿರೋಧ ವ್ಯಕ್ತಪಡಿಸಿದ್ದ, ಇದನ್ನು ಬೇಧಿಸುವ ಕೆಲಸ ಸದ್ಯ ನಡೆಯುತ್ತಿದೆ. ಡಿಜಿಪಿ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ. ಸಿಐಡಿ ಸೇರಿ ಎಲ್ಲಾ ವಿಂಗ್‍ಗಳ ನೇತೃತ್ವದಲ್ಲಿ ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದರು.

ಕೆಲ ಸಂಘಟನೆಗಳಿಗೆ ಎನ್‍ಜಿಓ ಹಣ ವರ್ಗಾವಣೆ ನಡೆಸುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಕೆಲ ಎನ್‍ಜಿಓಗಳನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗಿದೆ. ಅಂತವರ ಮೇಲೆ ಈಡಿ ನಿಗಾ ಇಟ್ಟಿದ್ದು, ಮಾಹಿತಿ ಕಲೆ ಹಾಕುತ್ತಿದೆ. ಪ್ರಜಾಪ್ರಭುತ್ವದ ಮೂಲಕ ಎದುರಿಸಲು ಯಾವಾಗ ಆಗುವುದಿಲ್ಲವೊ ಅಂತಹವರು ಈ ಮಾರ್ಗ ಹಿಡಿಯುತ್ತಿದ್ದಾರೆ. ಅದನ್ನು ಸಮರ್ಥವಾಗಿ ನಾವು ಎದುರಿಸುತ್ತೇವೆ ಎಂದು ತಿಳಿಸಿದರು.

ರವಿ ಪೂಜಾರಿ ವಿಷಯದಲ್ಲಿ ಕಾನೂನು ತೊಡಕಿತ್ತು. ಇದೀಗ ಅದು ಎಲ್ಲವೂ ಕ್ಲಿಯರ್ ಆಗಿದೆ. ಅಲ್ಲಿನ ಕೋರ್ಟ್ ಎಲ್ಲದಕ್ಕೂ ಸಮ್ಮತಿ ಕೊಟ್ಟಿದೆ. ಇಂಟರ್ ನ್ಯಾಷನಲ್ ಕಾನೂನು ಫಾರ್ಮಲಿಟಿಸ್ ಬಾಕಿ ಇದೆ. ಅದು ಮುಗಿದ ಕೂಡಲೇ ಬೆಂಗಳೂರಿಗೆ ಕರೆತರುವ ಕೆಲಸ ಮಾಡುತ್ತೇವೆ. ಅಂತರಾಷ್ಟ್ರೀಯ ಸಚಿವಾಲಯ ಕೂಡ ನಿರಂತರ ಸಂಪರ್ಕದಲ್ಲಿದೆ. ನಮ್ಮ ಅಧಿಕಾರಿಗಳು ಅಲ್ಲಿಯೇ ಇದ್ದಾರೆ. ಶೀಘ್ರದಲ್ಲೇ ಅವರನ್ನು ಕರೆತರುವ ಕೆಲಸ ಮಾಡುತ್ತೇವೆ ಎಂದು ಹೇಳಿದರು. 

ಮಹದಾಯಿ ನ್ಯಾಯಾಧೀಕರಣದ ಅವಧಿ 6 ತಿಂಗಳ ವಿಸ್ತರಣೆಯಾಗುತ್ತದೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಮಸ್ಯೆ ಅಗುತ್ತದೆ ಅನ್ನೋದು ತಪ್ಪು ಗ್ರಹಿಕೆ. ಸುಪ್ರೀಂ ಕೋರ್ಟ್‍ನಲ್ಲಿ ಈ ಬಗ್ಗೆ ಅಧಿಸೂಚನೆ ಹೊರಡಿಸಲು ಆದೇಶ ಆಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಲಿದೆ. 5.3 ಅಡಿಯಲ್ಲಿ ಟ್ರಿಬ್ಯುನಲ್ ಮುಂದೆ ಇಡಲು ಹೇಳಿದ್ದಾರೆ. ಆರು ತಿಂಗಳ ಕಾಲಾವಕಾಶ ಕೇಳಿದ್ದಾರೆ. ಇದರಿಂದ ಯಾವುದೇ ಕಾರಣಕ್ಕೂ ಈ ಆದೇಶ ವಿಳಂಬವಾಗುವುದಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳ ನಿಷೇಧ ಮಾಡುವ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಎಲ್ಲಾ ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ. ಮಾಹಿತಿ ಬಂದ ನಂತರ ಎಲ್ಲವನ್ನೂ ನಿರ್ಧರಿಸಲಾಗುವುದು ಎಂದು ಬೊಮ್ಮಾಯಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News