ಆರೆಸ್ಸೆಸ್ ಕೇಂದ್ರದಲ್ಲಿ ಸಿದ್ಧಗೊಳ್ಳುವ ನಿಯಮಗಳು ಕಾನೂನುಗಳಾಗುತ್ತಿವೆ: ಸಿಪಿಎಂ ನಾಯಕ ಎಂ.ಎ.ಬೇಬಿ

Update: 2020-02-23 18:32 GMT

ತುಮಕೂರು, ಫೆ.23: ಕೇಂದ್ರ ಸರಕಾರ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ಎನ್.ಪಿ.ಆರ್ ನಂತಹ ಮಹತ್ವದ ಮಸೂದೆಗಳನ್ನು ವ್ಯವಹಾರಗಳ ಸಲಹಾ ಸಮಿತಿ ಮುಂದೆ ಚರ್ಚೆಗಿಡದೆ ನೇರವಾಗಿ ಸಂಸತ್ತಿನ ಅಧಿವೇಶನದಲ್ಲಿ ಮಂಡಿಸಿ ಕಾಯ್ದೆಗಳನ್ನಾಗಿ ಜಾರಿಗೊಳಿಸಿರುವುದು ಅಸಂವಿಧಾನಿಕ ಎಂದು ಸಿಪಿಎಂ ಪಕ್ಷದ ಪಾಲಿಟ್ ಬ್ಯೂರೋ ಸದಸ್ಯ ಎಂ.ಎ.ಬೇಬಿ ಆರೋಪಿಸಿದ್ದಾರೆ.

ತುಮಕೂರಿನ ಜನಚಳವಳಿ ಕೇಂದ್ರದಲ್ಲಿ ಫೆ.23ರಂದು ಭಾರತ ಕಮ್ಯೂನಿಸ್ಟ್ ಪಕ್ಷದ ವತಿಯಿಂದ ಸಿಎಎ, ಎನ್ಆರ್ ಸಿ, ಎನ್.ಪಿ.ಆರ್ ಸಂಬಂಧಿಸಿದಂತೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ರಾಜಕೀಯ ಮತ್ತು ಸಂಸದೀಯ ಇತಿಹಾಸದಲ್ಲಿ ಇದೇ ಮೊದಲಿಗೆ ಧರ್ಮಾಧಾರಿತ ಪೌರತ್ವ ನೋಂದಣಿ ಮಾಡಲು ಕೇಂದ್ರ ಸರಕಾರ ಹೊರಟಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಧರ್ಮಾಧಾರಿತ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಅವರ ನಿಜವಾದ ಬಣ್ಣ ಬಯಲಾಗಿದೆ. ಸಂವಿಧಾನಕ್ಕೆ ಪರ್ಯಾಯವಾಗಿ ದೇಶದಲ್ಲಿ ಅಧಿಕಾರ ಕೇಂದ್ರವೊಂದಿದೆ. ಅದು ಆರೆಸ್ಸೆಸ್. ಮೂಲಸ್ಥಾನ ನಾಗಪುರ. ಅಲ್ಲಿ ಸಿದ್ಧಗೊಳ್ಳುವ ನಿಯಮಗಳು ಕಾನೂನುಗಳಾಗುತ್ತಿವೆ. ಭಾರತೀಯ ಜನತಾ ಪಕ್ಷ ಆರೆಸ್ಸೆಸ್ ನ ರಾಜಕೀಯ ಅಸ್ತ್ರವಾಗಿದೆ ಎಂದು ಹೇಳಿದರು.

ಹಿಂದೆ ಯಾವುದೇ ಕಾಯ್ದೆಗಳು ರೂಪುಗೊಳ್ಳುವ ಮೊದಲು ಸಾರ್ವಜನಿಕವಾಗಿ ಚರ್ಚೆಗೆ ಒಳಪಡುತ್ತಿದ್ದವು. ಹಲವು ಸಭೆಗಳಲ್ಲಿ, ಸಂಸತ್ ನಲ್ಲಿ ಗಂಭೀರವಾದ ಚರ್ಚೆ ನಡೆದು ಅದರ ಸಾಧಕ ಬಾಧಕಗಳನ್ನು ಗುರುತಿಸಿ ಆನಂತರ ಕಾಯ್ದೆಗಳು ಜಾರಿಯಾಗುತ್ತಿದ್ದವು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ಮಸೂದೆಯ ಬಗ್ಗೆ ಚರ್ಚೆಗಳು ನಡೆದಿಲ್ಲ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನೇರವಾಗಿ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಮಸೂದೆಗಳನ್ನು ಮಂಡಿಸಿ ಚರ್ಚಿಸಲು ಅವಕಾಶ ನೀಡದೆ ಕಾಯ್ದೆ ಜಾರಿಗೆ ತರಲಾಗಿದೆ. ಇದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ವಿವರಿಸಿದರು.

ಆರೆಸ್ಸೆಸ್ ಹೇಳಿದಂತೆ ಬಿಜೆಪಿ ಕೇಳುತ್ತಿದೆ. ನಾಗಪುರದಲ್ಲಿ ಸಿದ್ಧವಾಗುವ ನಿಯಮಗಳನ್ನು ಜನರ ಮೇಲೆ ಹೇರುವ ಕೆಲಸ ನಡೆಯುತ್ತಿದೆ. ಫ್ಯಾಸಿಸ್ಟ್ ಶಕ್ತಿಗಳು ದೇಶವನ್ನು ಹಾಳುಗೆಡವುತ್ತಿವೆ. ಜರ್ಮನಿಯ ಹಿಟ್ಲರ್ ಮಾಡಿದಂತೆ ಭಾರತದಲ್ಲಿ ಮೋದಿ, ಅಮಿತ್ ಶಾ ಮತ್ತು ಯಡಿಯೂರಪ್ಪ ಬಂಧನ ಕೇಂದ್ರಗಳನ್ನು ಕಟ್ಟಲು ಹೊರಟಿದ್ದಾರೆ. ಇದರ ವಿರುದ್ಧ ಎಲ್ಲರೂ ಸಂಘಟಿತರಾಗಿ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.

ಆರೆಸ್ಸೆಸ್ ಮತ್ತು ಬಿಜೆಪಿ ಜನರನ್ನು ಭೀತರಾಗುವಂತಹ ವಾತಾವರಣ ಸೃಷ್ಟಿಸುತ್ತಿವೆ. ತನ್ನ ಸಿದ್ಧಾಂತ ಒಪ್ಪದವರನ್ನು ಗುಂಡಿಕ್ಕಿ ಕೊಲ್ಲಲಾಗುತ್ತಿದೆ. ಗೌರಿ ಲಂಕೇಶ್, ಎಂ.ಎಂ. ಕಲ್ಬುರ್ಗಿ ಹತ್ಯೆಯಾಗಿದೆ. ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇದೆ. ಇದರ ವಿರುದ್ಧ ಜಾತ್ಯತೀತ ಶಕ್ತಿಗಳು ಹೋರಾಡಬೇಕು ಎಂದರು.

ಸಿಎಎ, ಎನ್ಆರ್ ಸಿ ಮತ್ತು ಎನ್.ಪಿ.ಎ ವಿರುದ್ಧ ವಿದ್ಯಾರ್ಥಿಗಳು, ಯುವಜನರು, ರೈತರು ಮತ್ತು ಮಹಿಳಾ ಸಂಘಟನೆಗಳು ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರಬಲ ಹೋರಾಟಗಳನ್ನು ಮಾಡಬೇಕು. ಮನೆ ಮನೆಗೂ ಹೋಗಿ ಜನರಿಗೆ ಈ ಕಾಯ್ದೆಗಳ ಅಪಾಯದ ಕುರಿತು ಮನವರಿಕೆ ಮಾಡಬೇಕು. ದೇಶದಲ್ಲಿ ಕೇರಳ ಸೇರಿದಂತೆ 13 ರಾಜ್ಯಗಳು ಸಿಎಎ, ಎನ್ಆರ್ ಸಿ ಮತ್ತು ಎನ್.ಪಿ.ಆರ್ ಜಾರಿಗೊಳಿಸುವುದಿಲ್ಲ ಎಂದು ಹೇಳಿವೆ. ಇದು ಬಿಜೆಪಿಯ ಶಕ್ತಿಯನ್ನು ಕುಂದಿಸುವಂತೆ ಮಾಡಿದೆ ಎಂದರು.

ಕೇಂದ್ರ ಸರಕಾರ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ಆರ್ ಸಿ ಪ್ರಕಾರ ಮಹಾತ್ಮ ಗಾಂಧೀಗೂ ಪೌರತ್ವ ನೀಡಲು ಬರುವುದಿಲ್ಲ. ಗಾಂಧಿ ರಾಮ್-ರಹೀಮ್ ಇಬ್ಬರೂ ಒಂದೇ ಎಂದರು. ಈಗಿನ ಪರಿಸ್ಥಿತಿಯಲ್ಲಿ ರಾಮನನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ರಹೀಮನನ್ನು ಆಯ್ಕೆ ಮಾಡಿಕೊಳ್ಳಬೇಕು. ಅಂತಹ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ. ರಾಮನಿಗೆ ಪೌರತ್ವ ನೀಡಿದರೆ, ರಹೀಮನಿಗೆ ಪೌರತ್ವ ಇಲ್ಲ. ಹಿಂದೂಗಳು ಪೌರತ್ವ ಪಡೆಯುವುದು ಕಷ್ಟದ ಕೆಲಸ. ಹೀಗಾಗಿ ಕೇಂದ್ರದ ಕಾಯ್ದೆಗಳ ವಿರುದ್ಧ ಜನರು ಅಸಹಕಾರ ತೋರಬೇಕು ಎಂದು ವಿವರಿಸಿದರು.

ಕಮ್ಯೂನಿಸ್ಟರು ಎಲ್ಲ ಧರ್ಮಗಳನ್ನ ಸಮಾನವಾಗಿ ಗೌರವಿಸುತ್ತಾರೆ. ಜನರ ನಂಬಿಕೆಗಳನ್ನು ಗೌರವಿಸುತ್ತಾರೆ. ಎಲ್ಲರೂ ಸಮಾನತೆಯಿಂದ ಇರಬೇಕು ಎಂದು ಬಯಸುತ್ತಾರೆ. ಆದರೆ ತಾರತಮ್ಯವನ್ನು ಸಹಿಸುವುದಿಲ್ಲ. ಗಾಂಧೀ, ಬುದ್ಧ  ಇದೇ ಹಾದಿಯಲ್ಲಿ ನಡೆದವರು. ಸಂವಿಧಾನವೂ ಜಾತಿ, ಧರ್ಮದ ಹೆಸರಿನಲ್ಲಿ ತಾರತಮ್ಯ ಮಾಡುವುದನ್ನು ವಿರೋಧಿಸುತ್ತದೆ. ಈ ಹಿನ್ನೆಲೆಯಲ್ಲಿ ಜನಪರ ಹೋರಾಟಗಳಲ್ಲಿ ಎಲ್ಲ ಜನವಿಭಾಗವು ಪಾಲ್ಗೊಳ್ಳಬೇಕು. ಜನ ವಿರೋಧಿ ನೀತಿಗಳನ್ನು ವಿರೋಧಿಸಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ವಿಶ್ರಾಂತ ಪ್ರಾಂಶುಪಾಲ ಜಿ.ಎಂ.ಶ್ರೀನಿವಾಸಯ್ಯ, ಸಿಪಿಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜು, ರಾಜ್ಯ ಮುಖಂಡ ಕೆ.ಎನ್.ಉಮೇಶ್, ಮುಖಂಡರಾದ ಸೈಯದ್ ಮುಜೀಬ್, ಎನ್.ಕೆ.ಸುಬ್ರಮಣ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News