ಮಗು ಮೊಬೈಲ್ ಫೋನ್ ಹಾಳು ಮಾಡಿದ್ದಕ್ಕೆ ತಂದೆಯ ಥಳಿಸಿ ಹತ್ಯೆ

Update: 2020-02-24 04:19 GMT

ಬೆರ್ಹ್ರಾಂಪುರ, ಫೆ.24: ಏಳು ವರ್ಷದ ಮಗು ಸ್ಮಾರ್ಟ್‌ಫೋನ್ ಹಾಳು ಮಾಡಿದೆ ಎಂದು ಆರೋಪಿಸಿ ಜಗಳ ತೆಗೆದ ಪಕ್ಕದ ಮನೆಯ ವ್ಯಕ್ತಿ, ಮಗುವಿನ ತಂದೆಯನ್ನು ಹೊಡೆದು ಸಾಯಿಸಿದ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ನಡೆದಿದೆ.

ಅಲೀಮುಲ್ ಶೇಕ್ (31) ಮೃತ ವ್ಯಕ್ತಿ. ಶೇಕ್ ಅವರ ಏಳೂ ವರ್ಷದ ಮಗ ಸ್ಮಾರ್ಟ್‌ಫೋನ್ ಕದ್ದಿದ್ದಾನೆ ಎಂದು ಆಪಾದಿಸಿದ ನೆರೆಮನೆಯ ಮಲ್ಲಾ ಬಕ್ಕಾಸ್ ಎಂಬಾತ ಜಗಳಕ್ಕಿಳಿದಿದ್ದಾನೆ. ಈ ವೇಳೆ ಸ್ಥಳೀಯರು ಮಧ್ಯಪ್ರವೇಶಿಸಿ ಜಗಳ ನಿಲ್ಲಿಸಿದ್ದಾರೆ. ಬಳಿಕ ಫೋನ್, ಬಕ್ಕಾಸ್‌ನ ಮೊಮ್ಮಗ ಹಾಗೂ ಶೇಖ್‌ನ ಮಗ ಆಡುತ್ತಿದ್ದ ಜಾಗದಲ್ಲಿ ಪತ್ತೆಯಾಯಿತೆನ್ನಲಾಗಿದೆ.

"ಮಧ್ಯರಾತ್ರಿ ವೇಳೆಗೆ ಮಕ್ಕಳೊಂದಿಗೆ ಶೇಖ್ ಅವರ ಮನೆಗೆ ನುಗ್ಗಿದ ಬಕ್ಕಾಸ್, ಲಾಠಿ ಹಾಗೂ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ. ಮಗು ಆಟವಾಡುವಾಗ ಸ್ಮಾರ್ಟ್‌ಫೋನ್ ಹಾಳುಮಾಡಿದೆ ಎಂದು ಆಪಾದಿಸಿ ಹಲ್ಲೆ ನಡೆಸಿದ್ದಾಗಿ ಶೇಖ್ ಸಹೋದರ ಮುಹಮ್ಮದ್ ವಹಾಬ್ ಆಪಾದಿಸಿದ್ದಾರೆ. ಮನೆಯಲ್ಲಿ ಗದ್ದಲ ಕೇಳಿ ಓಡಿಬಂದಾಗ ಸಹೋದರ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಟವೆಲ್‌ನಿಂದ ಆತನ ಕುತ್ತಿಗೆ ಬಿಗಿಯಲಾಗಿತ್ತು. ತಕ್ಷಣ ಆಸ್ಪತ್ರೆಗೆ ಒಯ್ದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ವಹಾಬ್ ವಿವರಿಸಿದ್ದಾರೆ.

ನೆರೆಮನೆಯ ಕುಟುಂಬದ ಐವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News