ಅಮೆರಿಕ-ಭಾರತದ ಮುಖಂಡರ ನೀತಿಗಳಲ್ಲಿ ಮುಸ್ಲಿಂ ವಿರೋಧಿ ಮನೋಭಾವ: ಆ್ಯಮ್ನೆಸ್ಟಿ ಆತಂಕ

Update: 2020-02-24 15:36 GMT

ಹೊಸದಿಲ್ಲಿ, ಫೆ.24: ಭಾರತ ಮತ್ತು ಅಮೆರಿಕ ಎರಡೂ ದೇಶಗಳ ಮುಖಂಡರ ನೀತಿಗಳಲ್ಲಿ ಮುಸ್ಲಿಂ ವಿರೋಧಿ ಭಾವನೆ ವ್ಯಾಪಿಸಿದೆ. ಧರ್ಮಾಂಧತೆ ಮತ್ತು ವೈಷಮ್ಯಗಳು ಈಗ ಎರಡೂ ದೇಶಗಳ ಸರಕಾರದ ಸಿದ್ಧಾಂತವಾಗಿದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತ ಭೇಟಿಗೂ ಮುನ್ನ ಎರಡೂ ದೇಶಗಳ ಮಾನವ ಹಕ್ಕು ಸಂಘಟನೆ ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಆರೋಪಿಸಿದೆ.

ದಶಕಗಳಿಂದಲೂ ಅಮೆರಿಕ - ಭಾರತ ಸಂಬಂಧ ಮಾನವ ಹಕ್ಕು ಮತ್ತು ಮಾನವ ಘನತೆಯ ಮೂಲತತ್ವವನ್ನು ಹೊಂದಿದ್ದವು ಎಂದು ಹೇಳಲಾಗಿತ್ತು. ಆದರೆ ಈಗ ಎರಡೂ ದೇಶಗಳ ಸಂಬಂಧ ಭೇದಭಾವ ಮತ್ತು ಧರ್ಮಾಂಧತೆ ಎಂಬ ಮೂಲತತ್ವಗಳನ್ನು ಆಧರಿಸಿದೆ. ವಲಸಿಗರ ಹಾಗೂ ಆಶ್ರಯ ಕೋರಿ ಬರುವವರ ವಿರುದ್ಧ ದ್ವೇಷಭಾವನೆ ಎರಡೂ ದೇಶದ ಸರಕಾರಗಳ ನೀತಿಯಾಗಿದೆ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಯುಎಸ್‌ಎ ಕಾರ್ಯನಿರ್ವಾಹಕ ನಿರ್ದೇಶಕಿ ಮಾರ್ಗರೇಟ್ ಹುವಾಂಗ್ ಹೇಳಿದ್ದಾರೆ.

ಭಾರತದ ಸಂಸತ್ತು ಕಳೆದ ಡಿಸೆಂಬರ್‌ನಲ್ಲಿ ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಅಮೆರಿಕ ಸರಕಾರ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ದೇಶಗಳಿಂದ ವಲಸೆ ಬರುವುದನ್ನು ವಿರೋಧಿಸಿ ಪ್ರಯಾಣ ನಿಷೇಧ ವಿಧಿಸಿರುವುದನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ. ಅಲ್ಲದೆ ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ಗಳಿಂದ ನಿರ್ದಿಷ್ಟವಾಗಿ ಮುಸ್ಲಿಮರು ಬಂಧನ ಕೇಂದ್ರದ ಪಾಲಾಗುವ ಅಥವಾ ಪೌರತ್ವವಿಲ್ಲದ ಸ್ಥಿತಿಗೆ ತಲುಪಬಹುದು ಎಂದು ಆ್ಯಮ್ನೆಸ್ಟಿ ಆತಂಕ ವ್ಯಕ್ತಪಡಿಸಿದೆ.

ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಪೊಲೀಸರ ಕಾರ್ಯಾಚರಣೆ ಮತ್ತು ಜಮ್ಮುಕಾಶ್ಮೀರದಲ್ಲಿ ರಾಜಕೀಯ ನಾಯಕರನ್ನು ಬಂಧನದಲ್ಲಿಟ್ಟಿರುವುದನ್ನು ಟೀಕಿಸಿದೆ. ಅಲ್ಲದೆ ‘ಪ್ರತಿಭಟನಾಕಾರರನ್ನು ಅವರ ಬಟ್ಟೆಯಿಂದ ಗುರುತಿಸಬಹುದು, ಎಂಬ ಪ್ರಧಾನಿ ಮೋದಿ ಹೇಳಿಕೆ ಜನಸಾಮಾನ್ಯರ ಮನದಲ್ಲಿದ್ದ ಭೀತಿಯನ್ನು ಇನ್ನಷ್ಟು ಹೆಚ್ಚಿಸಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕಾಶ್ಮೀರದಲ್ಲಿ ಇಂಟರ್‌ನೆಟ್ ಹಾಗೂ ರಾಜಕೀಯ ನಿರ್ಬಂಧ ಹಲವು ತಿಂಗಳವರೆಗೆ ಮುಂದುವರಿದಿದೆ. ಪೌರತ್ವ ಕಾಯ್ದೆ ಜಾರಿ ಮತ್ತು ಪ್ರತಿಭಟನಾಕಾರರ ಮೇಲೆ ಬಲಪ್ರಯೋಗದ ಘಟನೆ ನಾಯಕರಲ್ಲಿ ಸಹಾನುಭೂತಿಯ ಕೊರತೆ ಮತ್ತು ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಲು ಇಷ್ಟವಿಲ್ಲದಿರುವುದನ್ನು ತೋರಿಸಿಕೊಟ್ಟಿದೆ. ಆದ್ದರಿಂದ ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ ಸಂದರ್ಭ ಈ ಆತಂಕದ ಬಗ್ಗೆ ಸಮಾಲೋಚಿಸಬೇಕು ಮತ್ತು ಅಂತರಾಷ್ಟ್ರೀಯ ಸಮುದಾಯದ ಜೊತೆ ಸೇರಿ ಕೆಲಸ ಮಾಡಬೇಕು ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಅವಿನಾಶ್ ಕುಮಾರ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News