ಜ್ಯೂಸ್ ಎಂದು ಕ್ರಿಮಿನಾಶಕ ಸೇವಿಸಿ ಪುಟಾಣಿ ಅಣ್ಣ-ತಂಗಿ ಮೃತ್ಯು

Update: 2020-02-26 06:22 GMT

ಯಾದಗಿರಿ, ಫೆ.26: ಮನೆಯಲ್ಲಿದ್ದ ಕ್ರಿಮಿನಾಶಕವನ್ನು ಸೇವಿಸಿ ಇಬ್ಬರು ಪುಟಾಣಿ ಮಕ್ಕಳು ಮೃತಪಟ್ಟ ಘಟನೆ ಜಿಲ್ಲೆಯ ವಡಗೇರ ತಾಲೂಕಿನ ಕೊಡಾಲ್ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸಂಭವಿಸಿರುವುದು ವರದಿಯಾಗಿದೆ.

ಇಲ್ಲಿ ನಿವಾಸಿ ಶಹನಾಝ್ ಎಂಬವರ ಮಕ್ಕಳಾದ 2 ವರ್ಷದ ಖೈರುನ್ ಹಾಗೂ 4 ತಿಂಗಳ ಅಫ್ಸಾನ ಮೃತಪಟ್ಟವರಾಗಿದ್ದಾರೆ. ಮಕ್ಕಳ ಸಾವಿನಿಂದ ಆಘಾತಗೊಂಡ ತಾಯಿ ಶಹನಾಝ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಯಾದಗಿರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ರಾತ್ರಿ ಈ ಅವಘಡ ಸಂಭವಿಸಿದೆ. ಶಹನಾಝ್ ಅಡುಗೆ ಮನೆಯಲ್ಲಿದ್ದ ವೇಳೆ ಮಕ್ಕಳು ಹೊರ ವರಾಂಡದಲ್ಲಿ ಆಟವಾಡುತ್ತಿದ್ದರೆನ್ನಲಾಗಿದೆ. ಈ ವೇಳೆ ಅಲ್ಲೆಲ್ಲೋ ಇದ್ದ ಕ್ರಿಮಿನಾಶಕವನ್ನು ಇಬ್ಬರು ಮಕ್ಕಳು ಜ್ಯೂಸೆಂದು ಭಾವಿಸಿ ಕುಡಿದಿದ್ದರೆನ್ನಲಾಗಿದೆ. ಇದರಿಂದ ತೀವ್ರ ಅಸ್ವಸ್ಥಗೊಂಡಿದ್ದ ಖೈರುನ್ ಮತ್ತು ಅಫ್ಸಾನರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು.
ಮಕ್ಕಳ ಸಾವಿನಿಂದ ಆಘಾತಗೊಂಡ ತಾಯಿ ಶಹನಾಝ್ ಕೂಡಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅಸ್ವಸ್ಥಗೊಂಡಿರುವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News