ಭಯೋತ್ಪಾದಕ ಕಸಬ್ ಪರ ವಕೀಲರಿಗೂ ವಾದ ಮಂಡಿಸಲು ಅವಕಾಶ ನೀಡಲಾಗಿತ್ತು: ಹೈಕೋರ್ಟ್

Update: 2020-02-26 14:06 GMT

ಬೆಂಗಳೂರು, ಫೆ.26: ಕಾಶ್ಮೀರ ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ವಕೀಲರ ಸಂಘ ಕೈಗೊಂಡಿರುವ ನಿರ್ಣಯ ಕಾನೂನು ಬಾಹಿರವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಭಯೋತ್ಪಾದಕ ಅಜ್ಮಲ್ ಕಸಬ್ ಪರ ವಕೀಲರಿಗೆ ವಾದ ಮಂಡಿಸಲು ಅವಕಾಶ ನೀಡಲಾಗಿತ್ತು ಎಂದು ತಿಳಿಸಿದೆ.

ಈ ಕುರಿತು ವಕೀಲ ಬಿ.ಟಿ.ವೆಂಕಟೇಶ್ ಸೇರಿ 24 ಮಂದಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ವಾದಿಸಿದ ಹಿರಿಯ ನ್ಯಾಯವಾದಿ ರವಿವರ್ಮಕುಮಾರ್ ಅವರು, ಕಾಶ್ಮೀರ ವಿದ್ಯಾರ್ಥಿಗಳ ಪರ ವಾದಿಸದಂತೆ ಕೆಲವರು ಅಡ್ಡಿಪಡಿಸುತ್ತಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ವಾದಿಸಿ, ವಿದ್ಯಾರ್ಥಿಗಳ ಪರ ವಾದಿಸುವ ವಕೀಲರಿಗೆ ಎಲ್ಲ ರೀತಿಯ ರಕ್ಷಣೆ ನೀಡಲಾಗಿದೆ. ಆದರೆ, ಹೊರಗಿನವರು ವಾದ ಮಂಡಿಸಲು ಅಡ್ಡಿಪಡಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಹುಬ್ಬಳ್ಳಿ ವಕೀಲರ ಸಂಘವು ನಿರ್ಣಯವನ್ನು ವಾಪಸ್ ತೆಗೆದುಕೊಳ್ಳುವುದರ ಬಗ್ಗೆ ಮಾಹಿತಿ ನೀಡಬೇಕು. ಇಲ್ಲವೇ ವಿದ್ಯಾರ್ಥಿಗಳ ಪ್ರಕರಣದ ವಿಚಾರಣೆಯನ್ನು ಬೆಂಗಳೂರಿಗೆ ವರ್ಗಾಯಿಸಲು ಇಚ್ಛಿಸುತ್ತೀರಾ ಎಂಬುದರ ಬಗ್ಗೆ ಫೆ.27ರಂದು ಮಾಹಿತಿ ನೀಡಲು ಸೂಚಿಸಿತು.
ದೇಶದಲ್ಲಿಯೇ ಕರ್ನಾಟಕದ ಕೋರ್ಟ್ ಗೆ ಒಳ್ಳೆಯ ಹೆಸರಿದೆ. ವಕೀಲರಿಗೆ ರಕ್ಷಣೆ ನೀಡುವಲ್ಲಿ ಪೊಲೀಸರು ಅಸಹಾಯಕರಾಗಿದ್ದಾರೆ ಎಂದು ನ್ಯಾಯಪೀಠವು ಕಿಡಿಕಾರಿತು ಮತ್ತು ವಿಚಾರಣೆಯನ್ನು ಫೆ.27ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News