ಬಿರಿಯಾನಿ ತಿನ್ನಿಸುವ ಕಾಲ ಮುಗಿಯಿತು, ಇದು ಕಂಡಲ್ಲಿ ಗುಂಡಿಕ್ಕುವ ಕಾಲ: ಬಿಜೆಪಿ ಶಾಸಕ ಯತ್ನಾಳ್

Update: 2020-02-26 12:57 GMT

ವಿಜಯಪುರ, ಫೆ.26: ಕಾಂಗ್ರೆಸ್-ಜೆಡಿಎಸ್ ಮುಖವಾಣಿಯಾಗಿರುವ ಎಚ್.ಎಸ್.ದೊರೆಸ್ವಾಮಿ ವಿರುದ್ಧ ತಾನು ನೀಡಿರುವ ಹೇಳಿಕೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ನನ್ನ ವಿರುದ್ಧ ಹೋರಾಟ ಮಾಡಿದರೆ ಅವರಿಗೆ ಯಾವುದೆ ಲಾಭ ಇಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪುನರುಚ್ಚರಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೊರೆಸ್ವಾಮಿ ಪಾಕಿಸ್ತಾನದ ಪರವಾಗಿ ಮಾತನಾಡುತ್ತಿದ್ದಾರೆ. ದೇಶ ವಿರೋಧಿಗಳ ವಿರುದ್ಧ ಅವರು ಹೋರಾಟ ಮಾಡಿದರೆ ಒಳ್ಳೆಯದು ಎಂದರು.

ಪಾಕಿಸ್ತಾನದ ಪರವಾಗಿ ಮಾತನಾಡುವವರನ್ನು ನೇರವಾಗಿ ಮೇಲಕ್ಕೆ ಕಳಿಸುತ್ತೇವೆ. ನಿನ್ನೆಯಿಂದಲೆ ಅದು ಕಾರ್ಯಾರಂಭವಾಗಿದೆ ಎಂದು ದಿಲ್ಲಿಯಲ್ಲಿ ನಡೆದ ಹಿಂಸಾಚಾರವನ್ನು ಸಮರ್ಥಿಸಿಕೊಂಡ ಬಸನಗೌಡ ಪಾಟೀಲ್ ಯತ್ನಾಳ್, ಸೋನಿಯಾಗಾಂಧಿ ಸೇರಿದಂತೆ ಯಾರಿಗೂ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಪ್ರಶ್ನಿಸುವ ನೈತಿಕತೆ ಇಲ್ಲ ಎಂದರು.

ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವ ಜನರನ್ನು ಜೈಲಿಗೆ ಕರೆದುಕೊಂಡು ಹೋಗಿ ಬಿರಿಯಾನಿ ತಿನ್ನಿಸುವ ಕಾಲ ಮುಗಿದಿದೆ. ಇನ್ನೇನಿದ್ದರೂ ಸ್ಥಳದಲ್ಲೆ ತೀರ್ಮಾನ ಕೈಗೊಳ್ಳುವ ಸಮಯ ಬಂದಿದೆ. ಕಂಡಲ್ಲಿ ಗುಂಡಿಕ್ಕುವ ಕಾಲ ಸನ್ನಿಹಿತವಾಗಿದೆ ಎಂದು ಎಂದು ಅವರು ಹೇಳಿದರು.

ಮಂಗಳೂರು ಗಲಭೆಯ ಸಂದರ್ಭದಲ್ಲಿ ಅಲ್ಲಿನ ಪೊಲೀಸರು ಸರಿಯಾದ ನಿರ್ಣಯ ತೆಗೆದುಕೊಳ್ಳದೆ ಇದ್ದಿದ್ದರೆ ದಿಲ್ಲಿಯಲ್ಲಿ ಆಗಿರುವ ರೀತಿಯಲ್ಲಿ ಗಲಭೆಗಳು ನಡೆಯುವ ಸಾಧ್ಯತೆಗಳು ಇತ್ತು ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಿಲ್ಲಿಯಿಂದ ತೆರಳುವುದನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಕಾಯುತ್ತಿದ್ದರು. ಅವರು ತೆರಳುತ್ತಿದ್ದಂತೆ ನಿಜವಾದ ಕಾರ್ಯಾಚರಣೆ ಆರಂಭವಾಗಿದೆ. ದೇಶದಲ್ಲಿ ಇಂತಹ ಕ್ರಾಂತಿ ಆಗದಿದ್ದರೆ, ಹಿಂದೂಗಳು ಉಳಿಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News