ಮಹಿಳಾ ಮೀನುಗಾರರಿಗೆ ದ್ವಿಚಕ್ರ ವಾಹನ ವಿತರಿಸಲು ಪ್ರಸ್ತಾವ: ಸಚಿವ ಕೋಟ ಪೂಜಾರಿ

Update: 2020-02-26 14:50 GMT

ಹಾವೇರಿ, ಫೆ. 26: ಆಯವ್ಯಯದಲ್ಲಿ ಮಹಿಳಾ ಮೀನುಗಾರರಿಗೆ ದ್ವಿಚಕ್ರ ವಾಹನ ವಿತರಿಸುವ ನೂತನ ಯೋಜನೆ ಜಾರಿಗೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಂದಿಲ್ಲಿ ಮಾಹಿತಿ ನೀಡಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮತ್ಸದರ್ಶಿನಿ ಯೋಜನೆಯಡಿ ರಾಜ್ಯದ ಎಲ್ಲ ಕಡೆಗಳಲ್ಲಿ ಮೀನುಗಾರಿಕೆ ಇಲಾಖೆಯಿಂದ ಹೊಟೇಲ್ ತೆರೆಯಲು ಉದ್ದೇಶಿಸಿದ್ದು, ಮೀನಿನ ಖಾದ್ಯಗಳನ್ನು ವಿತರಿಸಲು ಕ್ರಮ ವಹಿಸಲಾಗುವುದು ಎಂದರು.

ಮೀನು ಸಾಕಾಣಿಕೆ ಅಭಿವೃದ್ಧಿ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಕೆರೆ ಮತ್ತು ಜಲಾಶಯಗಳನ್ನು ಗುತ್ತಿಗೆ ನೀಡುವ ಪದ್ಧತಿಯಲ್ಲಿ ಪಾರದರ್ಶಕತೆ ಕಾಯ್ದು ಕೊಳ್ಳಲಾಗುವುದು. ಜಲಮೂಲಗಳ ಗುತ್ತಿಗೆಗೆ ಹೊಸ ಸೂತ್ರ ರೂಪಿಸಲಾಗುವುದು ಎಂದರು.

ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿ, ಟೆಂಡರ್ ಕರೆಯಬೇಕೇ ಅಥವಾ ಪಂಚಾಯತ್ ಮಟ್ಟದಲ್ಲಿ ಹರಾಜು ಹಾಕಬೇಕೇ ಎಂಬುದನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದ ಅವರು, ರಾಜ್ಯ ಸರಕಾರ ಮೀನುಗಾರಿಕೆ ಅಭಿವೃದ್ಧಿಗೆ ಬದ್ಧ ಎಂದರು.

ಜಿ.ಪಂ. ಸಿಇಒ ಅವರನ್ನು ಮುಖಸ್ಥರನ್ನಾಗಿ ಮಾಡಿ, ಎ, ಬಿ ಹಾಗೂ ಸಿ ದರ್ಜೆಯ ಕೆರೆಗಳನ್ನಾಗಿ ವರ್ಗೀಕರಿಸಲಾಗುವುದು. ಮೀನುಗಾರರ ಸಂಘ, ಎಸ್ಸಿ-ಎಸ್ಟಿ ಹಾಗೂ ಆರ್ಥಿಕ ದುರ್ಬಲರಿಗೂ ಕೆರೆಗಳೆಂದು ಮೀಸಲಿರಿಸಿ ಗುತ್ತಿಗೆ ನೀಡಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News