ಮೈಸೂರು: ಶಾಸಕ ಯತ್ನಾಳ್ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

Update: 2020-02-26 15:47 GMT

ಮೈಸೂರು,ಫೆ.26: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮೈಸೂರು ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಯತ್ನಾಳ್ ಮತ್ತು ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು. ಇದೇ ವೇಳೆ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಗಾಂಧಿ ಒಡನಾಡಿ ಎಚ್.ಎಸ್.ದೊರೆಸ್ವಾಮಿ ಅವರ ಬಗ್ಗೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕಪ್ಪು ಚುಕ್ಕೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನಪರ ಕಾಳಜಿ ಇಟ್ಟುಕೊಂಡು, ಸಾಮಾಜಿ ಹೋರಾಟಗಳಲ್ಲಿ ಭಾಗವಹಿಸುತ್ತಿರುವ 102 ವರ್ಷ ವಯಸ್ಸಿನ ಗೌರವಾನ್ವಿತ ವ್ಯಕ್ತಿಯ ಬಗ್ಗೆ ಈ ರೀತಿಯ ಹೇಳಿಕೆ ನೀಡಿರುವುದು ಅಕ್ಷಮ್ಯ ಅಪರಾಧ, ಕೂಡಲೇ  ಸರ್ಕಾರ ಇವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸದೆ, ಮೊಗಲರು ಮತ್ತು ಬ್ರಿಟಿಷರ ಗುಲಾಮಗಿರಿಯಲ್ಲಿ ದೇಶದ ಬಹುತ್ವವನ್ನು ಹಾಳು ಮಾಡಲು ಹೊರಟವರು ಇಂದು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಹಾಳುಮಾಡುತ್ತಿದ್ದಾರೆ. ಶಾಂತಿ ಸಹಬಾಳ್ವೆಯನ್ನು ಸಹಿಸದ ಕೋಮುವಾದಿಗಳು, ಯುವಕರು, ಮಹಿಳೆಯರ ಮನಸ್ಸಿನಲ್ಲಿ ಹಿಂದುತ್ವದ ವಿಷಬೀಜ ಬಿತ್ತಿ ಧರ್ಮಾಧಾರಿತ ಆಟವನ್ನು ಆಡಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಹಿಂದೂ ರಾಷ್ಟ್ರದ ಉದ್ದೇಶದೊಂದಿಗೆ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದ್ದಾರೆ. ಹಿಂದೂ ರಾಷ್ಟ್ರದ ಕಲ್ಪನೆ ನಿಜ ಆಗುವುದಿಲ್ಲ, ಧರ್ಮದ ಮೇಲಿನ ರಾಜಕಾರಣ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಹರಿಹಾಯ್ದರು.

ದೇಶದ ಸಂಸ್ಕೃತಿ ಸಂವಿಧಾನ ಜನರ ಆಶಯಗಳ ಮೂಲಕ ಸಮೃದ್ಧ ಭಾರತವನ್ನು ಕಟ್ಟುತ್ತದೆ ಅಂಬೇಡ್ಕರ್ ಮತ್ತು ಗಾಂಧಿ ಅವರ ಸಮ ಸಮಾಜದ ಕನಸು ಈಡೇರಬೇಕಾಗಿದೆ. ಧರ್ಮ ಅಧರ್ಮಗಳ ಮೂಲಕ ರಾಜಕೀಯ ಮಾಡುತ್ತಿರುವವರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ವಾಸು, ಕೆಪಿಸಿಸಿ ಸದಸ್ಯರಾದ ಹೆಡತಲೆ ಮಂಜುನಾಥ್, ಹುಲ್ಲಹಳ್ಳಿ ಬಸವರಾಜು, ಎನ್.ಲಕ್ಷ್ಮಣ್, ನಂಜನಗೂಡು ನಗರಸಭಾ ಸದಸ್ಯ ಎಸ್.ಪಿ.ಮಹೇಶ್, ಡಿಸಿಸಿ ಸದಸ್ಯರಾದ ಶಿವು, ಪುಟ್ಟರಸ, ತಿಮ್ಮಯ್ಯ, ಮಹೇಶ್, ಮನೋನ್ಮಣಿ, ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಶಿವಣ್ಣ, ಭಾಸ್ಕರ್ ಗೌಡ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶಾಸಕ ಯತ್ನಾಳ್ ವಿರುದ್ಧ ಬಿಜೆಪಿ ಕಠಿಣ ಕ್ರಮ ಕೈಗೊಳ್ಳಬೇಕು, ಎಚ್.ಎಸ್.ದೊರೆಸ್ವಾಮಿ ಅವರನ್ನು ಪಾಕೀಸ್ತಾನದ ಏಜೆಂಟ್ ಎಂದು ಕರೆದಿರುವುದನ್ನು ಸಾಬೀತು ಪಡಿಸಬೇಕು, ಗೃಹ ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅವರ ಮೇಲೆ ಕ್ರಮ ಕೈಗೊಂಡು ಸ್ವಾತಂತ್ರ್ಯದ ಹೋರಾಟವನ್ನು ಎತ್ತಿಹಿಡಿಯಬೇಕು.
-ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News