ಮಾಜಿ ಐಪಿಎಸ್ ಅಧಿಕಾರಿ ವಂಝಾರಾಗೆ ನಿವೃತ್ತಿ ಬಳಿಕ ಭಡ್ತಿ ನೀಡಿದ ಗುಜರಾತ್ ಸರಕಾರ

Update: 2020-02-26 17:02 GMT

ಅಹ್ಮದಾಬಾದ್, ಫೆ.26:ಗುಜರಾತ್ ಪೊಲೀಸರು ನಡೆಸಿದ ನಕಲಿ ಎನ್‌ ಕೌಂಟರ್ ಪ್ರಕರಣಗಳಲ್ಲಿ ಶಾಮೀಲಾಗಿದ್ದ ಆರೋಪದಲ್ಲಿ ಸುಮಾರು 8 ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದ ಡಿ.ಜಿ. ವಂಝಾರ ಅವರು 2014ರ ಮೇ 31ರಂದು ಪೊಲೀಸ್ ಉಪ ಮಹಾನಿರೀಕ್ಷಕ (ಡಿಐಜಿ) ಹುದ್ದೆಯಿಂದ ನಿವೃತ್ತರಾಗಿದ್ದರು. ಆದಾಗ್ಯೂ 2017 ಹಾಗೂ 2019ರಂದು ಸಿಬಿಐ ನ್ಯಾಯಾಲಯವು ಅವರನ್ನು ಈ ಎರಡೂ ನಕಲಿ ಎನ್‌ ಕೌಂಟರ್ ಪ್ರಕರಣಗಳಲ್ಲಿ ದೋಷಮುಕ್ತಿಗೊಳಿಸಿತ್ತು.

 ಇದರಿಂದಾಗಿ ವಂಝಾರ ಅವರು ಸೆಪ್ಟೆಂಬರ್ 2007ರಿಂದ ಪಾವತಿಗೆ ಬಾಕಿಯಿರುವ ಎಲ್ಲಾ ವೇತನ ಹಾಗೂ ಪಿಂಚಣಿಯ ಹಣವನ್ನು ಪಾವತಿಸುವಂತೆ ಗುಜರಾತ್ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಗೀತಾ ಸಿಂಗ್ ಆದೇ ನೀಡಿದ್ದಾರೆ.

 31-05-2014ರಂದು ಡಿಜಿಐಪಿ ದರ್ಜೆಯಲ್ಲಿ ನಿವೃತ್ತರಾದ ವಂಝಾರ ಅರಿಗೆ 29-09-2007ಕ್ಕೆ ಅನ್ವಯವಾಗುವಂತೆ ಐಜಿಪಿ ದರ್ಜೆಯ ಭಡ್ತಿ ನೀಡಲಾಗಿದೆ. ಇದರಿಂದಾಗಿ ಅವರು ಐಜಿಪಿ ದರ್ಜೆಯ ಬಾಕಿ ವೇತನ ಹಾಗೂ ಪಿಂಚಣಿಯನ್ನು ಪಡೆಯಲಿದ್ದಾರೆಂದು ಆದೇಶಪತ್ರದಲ್ಲಿ ತಿಳಿಸಲಾಗಿದೆ.

ಸೊಹ್ರಾಬುದ್ದೀನ್ ಶೇಖ್ ಹಾಗೂ ಆತನ ಪತ್ನಿ ಕೌಸರ್‌ಬಿ ಅವರ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ 1987ರ ಸಾಲಿನ ಐಪಿಎಸ್ ಅಧಿಕಾರಿ ವಂಝಾರ ಹಾಗೂ ಇನ್ನಿಬ್ಬರು ಪೊಲೀಸ್ ಅಧಿಕಾರಿಗಳಾದ ಆರ್.ಕೆ. ಪಾಂಡ್ಯನ್ ಹಾಗೂ ದಿನೇಶ್ ಎಂ.ಎನ್. ಅವರನ್ನು 2007ರಲ್ಲಿ ಗುಜರಾತ್ ಸಿಐಡಿ ತಂಡವು ಬಂಧಿಸಿತ್ತು. ಆನಂತರ ಇಶ್ರತ್ ಜಹಾನ್ ಹಾಗೂ ಇತರ ಮೂವರು ಮತ್ತು ತುಳಸಿರಾಮ್ ಪ್ರಜಾಪತಿಯ ಎನ್‌ಕೌಂಟರ್ ಪ್ರಕರಣದಲ್ಲೂ ವಂಝಾರ ಅವರನ್ನು ಬಂಧಿಸಲಾಗಿತ್ತು.

2014ರಲ್ಲಿ ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಅವರಿಗೆ ಜಾಮೀನು ನೀಡಿತ್ತು. 2015ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಕೂಡ ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಿತ್ತು.

2017ರಲ್ಲಿ ಅವರು ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ ಕೌಂಟರ್ ಪ್ರಕರಣದಲ್ಲಿ ದೋಷಮುಕ್ತಿಗೊಂಡಿದ್ದರು. 2019ರ ಮೇನಲ್ಲಿ ಅವರನ್ನು ಸಿಬಿಐ ನ್ಯಾಯಾಲಯ ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣದಲ್ಲಿ ಖುಲಾಸೆಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News