ದಿಲ್ಲಿ ಗಲಭೆ: ‘ಜಾಗರೂಕತೆಯಿಂದ’ ಇರುವಂತೆ ಪ್ರಜೆಗಳಿಗೆ ಅಮೆರಿಕ ಸಲಹೆ

Update: 2020-02-26 18:02 GMT

ವಾಶಿಂಗ್ಟನ್, ಫೆ. 26: ವಿವಾದಾಸ್ಪದ ಪೌರತ್ವ ಕಾನೂನಿಗೆ ಸಂಬಂಧಿಸಿ ದಿಲ್ಲಿಯ ಹಲವು ಭಾಗಗಳಲ್ಲಿ ಗಲಭೆಗಳು ನಡೆಯುತ್ತಿರುವಂತೆಯೇ, ‘ಜಾಗರೂಕತೆಯಿಂದ’ ಇರುವಂತೆ ಅಮೆರಿಕವು ತನ್ನ ಪ್ರಜೆಗಳಿಗೆ ಬುಧವಾರ ಸಲಹೆ ನೀಡಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತನ್ನ ಮೊದಲ ಭಾರತ ಭೇಟಿಯನ್ನು ಮುಕ್ತಾಯಗೊಳಿಸಿದ ಒಂದು ದಿನದ ಬಳಿಕ ಅಮೆರಿಕ ಈ ಎಚ್ಚರಿಕೆ ಹೊರಡಿಸಿದೆ.

ಮಂಗಳವಾರ ಅಮೆರಿಕಕ್ಕೆ ವಾಪಸಾಗುವ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ, ಪೌರತ್ವ ಕಾನೂನಿನ ವಿಷಯದಲ್ಲಿ ರಾಷ್ಟ್ರ ರಾಜಧಾನಿಯ ಕೆಲವು ಭಾಗಗಳಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಧಾರ್ಮಿಕ ಸ್ವಾತಂತ್ರದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಟ್ರಂಪ್, ಈ ವಿಷಯಗಳ ಬಗ್ಗೆ ನಾನು ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡಿದ್ದೇನೆ ಹಾಗೂ ‘‘ಜನರು ಧಾರ್ಮಿಕ ಸ್ವಾತಂತ್ರ್ಯ ಹೊಂದಬೇಕೆಂದು ಅವರು ಬಯಸುತ್ತಾರೆ’’ ಎಂದು ಹೇಳಿದರು.

ಬುಧವಾರ ಅಮೆರಿಕವು ತನ್ನ ನಾಗರಿಕರಿಗೆ ‘ಜಾಗರೂಕತೆಯಿಂದ’ ಇರುವಂತೆ ಸಲಹೆ ನೀಡಿದೆ.

‘‘ಈಶಾನ್ಯ ದಿಲ್ಲಿಯಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದ ನಾಗರಿಕರು ಎಚ್ಚರಿಕೆಯಿಂದ ಇರುವುದು ಅಗತ್ಯ. ಗಲಭೆಗಳು ನಡೆಯುತ್ತಿರುವ ಸ್ಥಳಗಳಿಗೆ ಹೋಗಬಾರದು’’ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

‘‘ಗಲಭೆಗಳ ಕುರಿತ ತಾಜಾ ಮಾಹಿತಿಗಳಿಗಾಗಿ ನೀವು ಸ್ಥಳೀಯ ಮಾಧ್ಯಮಗಳನ್ನು ಗಮನಿಸುತ್ತಿರಬೇಕು. ರಸ್ತೆಗಳು ಮತ್ತು ಮೆಟ್ರೋ ರೈಲುಗಳನ್ನು ಮುಚ್ಚಲಾಗಿದೆಯೇ ಹಾಗೂ ಕರ್ಫ್ಯೂ ಹೇರಲಾಗಿದೆಯೇ ಎನ್ನುವುದರ ಮೇಲೆ ನಿಗಾ ಇಡಬೇಕು. ನಾಲ್ಕು ಅಥವಾ ಹೆಚ್ಚು ಮಂದಿ ಒಟ್ಟು ಸೇರುವುದನ್ನು ನಿಷೇಧಿಸುವ, ಸೆಕ್ಷನ್ 144 ಎಂದು ಕರೆಯಲ್ಪಡುವ ನಿಷೇಧಾಜ್ಞೆಯನ್ನು ಕೆಲವು ಸ್ಥಳಗಳಲ್ಲಿ ಭಾರತ ಸರಕಾರ ವಿಧಿಸಿದೆ’’ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News