ದಿಲ್ಲಿ ಹಿಂಸಾಚಾರ: ಕೇಂದ್ರ ಸರಾಕರವನ್ನು ತರಾಟೆಗೆ ತೆಗೆದುಕೊಂಡ ಶಿವಸೇನೆ

Update: 2020-02-27 05:54 GMT

ಮುಂಬೈ, ಫೆ. 26: ದಿಲ್ಲಿ ಹಿಂಸಾಚಾರ ನಿಯಂತ್ರಿಸಲು ವಿಫಲವಾಗಿರುವ ಕೇಂದ್ರ ಸರಕಾರವನ್ನು ಶಿವಸೇನೆ ಬುಧವಾರ ತರಾಟೆಗೆ ತೆಗೆದುಕೊಂಡಿದೆ. ಹೊಸದಿಲ್ಲಿಯ ಹಿಂಸಾಚಾರದ ದೃಶ್ಯಗಳು 1984ರ ಸಿಕ್ಖ್ ವಿರೋಧಿ ಗಲಭೆಯನ್ನು ನೆನಪಿಸುತ್ತಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭ ಈ ಹಿಂಸಾಚಾರ ಸಂಭವಿಸಿದೆ. ಈ ಹಿಂದೆ ದಿಲ್ಲಿಗೆ ಈ ರೀತಿಯ ಅವಮಾನ ಅಗಿರಲಿಲ್ಲ ಎಂದು ಶಿವಸೇನೆ ತನ್ನ ಮುಖವಾಣಿಯಾದ ‘ಸಾಮ್ನಾ’ದ ಸಂಪಾದಕೀಯದಲ್ಲಿ ಹೇಳಿದೆ. ಭಾರತದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿ ನಡುವೆಯೂ ದಿಲ್ಲಿಯಲ್ಲಿ ಹಿಂಸಾಚಾರ ಮುಂದುವರಿದಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ಮಾತುಕತೆ ನಡೆಸುತ್ತಿದ್ದರೂ ದಿಲ್ಲಿ ಹೊತ್ತಿ ಉರಿಯುತ್ತಿದೆ. ಗಲಭೆಯ ಹಿಂದೆ ಯಾವುದೇ ಕಾರಣ ಇರಬಹುದು. ಆದರೆ, ಕೇಂದ್ರ ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾಗಿದೆ ಎಂಬುದು ಸತ್ಯ ಎಂದು ಅದು ಹೇಳಿದೆ.

1984ರ ಸಿಕ್ಖ್ ಗಲಭೆ ಕುರಿತಂತೆ ಕಾಂಗ್ರೆಸ್ ಮೇಲೆ ಯಾವತ್ತೂ ಇಂದು ಕೂಡ ಆರೋಪ ಹೊರಿಸಲಾಗುತ್ತಿದೆ. ದಿಲ್ಲಿಯಲ್ಲಿ ಈಗ ನಡೆಯುತ್ತಿರುವ ಭೀಬತ್ಸ ಚಿತ್ರಣ 1984ರ ಸಿಕ್ಖ್ ಗಲಭೆಯನ್ನು ನೆನಪಿಸಿದೆ. ಈ ಹಿಂಸಾಚಾರಕ್ಕೆ ಯಾರು ಹೊಣೆ ಎಂಬುದನ್ನು ಕೇಂದ್ರ ಸರಕಾರ ಸ್ಪಷ್ಟಪಡಿಸಬೇಕು. ದಿಲ್ಲಿ ವಿಧಾನ ಸಭೆ ಚುನಾವಣೆ ಪೂರ್ಣಗೊಂಡ ಬಳಿಕ ಹಿಂಸಾಚಾರ ಉದ್ಭವಿಸಿರುವುದು ಆಶ್ಚರ್ಯಕರ ಎಂದು ಅದು ತಿಳಿಸಿದೆ. ಕೋಮು ಹಿಂಸಾಚಾರ ಯೋಜಿಸಿದ ಕುರಿತು ಮಾಹಿತಿ ಸಂಗ್ರಹಿಸುವಲ್ಲಿ ಕೇಂದ್ರ ಗೃಹ ಸಚಿವಾಲಯದ ವಿಫಲತೆಯನ್ನು ತರಾಟೆಗೆ ತೆಗೆದುಕೊಂಡ ಶಿವಸೇನೆ, ಇದು ದೇಶದ ಭದ್ರತೆಗೆ ಮಾರಕ. ವಿಧಿ 370 ಹಾಗೂ 35 ಎಯನ್ನು ರದ್ದುಗೊಳಿಸುವ ಸಂದರ್ಭದಲ್ಲಿ ತೋರಿಸಿದ ದೈರ್ಯವನ್ನು ದಿಲ್ಲಿಯಲ್ಲಿ ಹಿಂಸಾಚಾರ ನಿಯಂತ್ರಿಸುವಲ್ಲಿ ಕೇಂದ್ರ ಸರಕಾರ ತೋರಿಸಿಲ್ಲ ಎಂದು ಶಿವಸೇನೆ ಹೇಳಿದೆ.

ಸೇನಾ ಸಮವಸ್ತ್ರದಲ್ಲಿರುವ ವ್ಯಕ್ತಿಗಳನ್ನು ಜಾಫ್ರಾಬಾದ್‌ನಲ್ಲಿ ನಿಯೋಜಿಸಲಾಗಿದೆ. ಆದರೆ, ಅವರು ನಮ್ಮ ಯೋಧರಲ್ಲ ಎಂದು ಸೇನೆಯ ವಕ್ತಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹಾಗಾದರೆ, ಈ ಹಿಂಸಾಚಾರ ಪೀಡಿದ ಪ್ರದೇಶಗಳಲ್ಲಿ ನಿಯೋಜನೆಯಾದವರು ಯಾರು ? ಈ ಹಿಂದೆ ಬಿಜೆಪಿ ಕಾರ್ಯಕರ್ತೆಯೊಬ್ಬರು ಬುರ್ಖಾ ಹಾಕಿಕೊಂಡು ಶಾಹೀನ್‌ಬಾಗ್ ಪ್ರವೇಶಿಸಿದ್ದರು. ಆದುದರಿಂದ ಯಾವ ಬಟ್ಟೆಯಲ್ಲಿ, ಯಾವ ಮುಖವಾಡದಲ್ಲಿ ಯಾರಿದ್ದಾರೆ ಎಂಬುದು ತಿಳಿದುಕೊಳ್ಳಬೇಕಿದೆ ಎಂದು ಶಿವಸೇನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News