ದೊರೆಸ್ವಾಮಿ ವಿರುದ್ಧದ ಯತ್ನಾಳ್ ಹೇಳಿಕೆ ಸಮರ್ಥಿಸಿಕೊಂಡ ಸಚಿವ ಈಶ್ವರಪ್ಪ

Update: 2020-02-27 06:00 GMT

ಶಿವಮೊಗ್ಗ, ಫೆ.27: ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟಗಾರರು. ಆದರೆ ಅವರು ಒಂದು ಪಕ್ಷದ ಪರವಾಗಿ ಮಾತನಾಡಿದರೆ ಅವರ ಬಗ್ಗೆ ಗೌರವ ಹೇಗೆ ಉಳಿಯುತ್ತದೆ. ಸ್ವಾತಂತ್ರ್ಯ ಹೋರಾಟಗಾರರು ಪಕ್ಷಾತೀತವಾಗಿರಬೇಕು ಎನ್ನುವ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

 ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಕಾಂಗ್ರೆಸ್ ನಾಯಕರು ನೀಡಿದ ಹೇಳಿಕೆಗೆ ಹಿಂದಿನಿಂದನೂ ದೊರೆಸ್ವಾಮಿ ಅವರು ಬೆಂಬಲ‌ ನೀಡಿಕೊಂಡೇ ಬಂದಿದ್ದಾರೆ. ಆದರೆ ಸ್ವಾತಂತ್ರ್ಯ ಹೋರಾಟಗಾರರಾಗಿರುವ ದೊರೆಸ್ವಾಮಿ ಪಕ್ಷಾತೀತವಾಗಿರಬೇಕಿತ್ತು ಎಂದರು.

ದೊರೆಸ್ವಾಮಿ ಅವರು ಪಾಕಿಸ್ತಾನ್ ಝಿಂದಾಬಾದ್ ಎಂದವರ ವಿರುದ್ಧ ಧರಣಿ ಕೂತಿದ್ದರೆ ನಾವೂ ಅವರಿಗೆ ಬೆಂಬಲ ನೀಡುತ್ತಿದ್ದೆವು‌. ದೊರೆಸ್ವಾಮಿ ಹಿರಿತನಕ್ಕೆ ತಕ್ಕಂತೆ ಮಾರ್ಗದರ್ಶ ಮಾಡಿದರೆ ನಾವು ಅವರೊಂದಿಗೆ ಇರುತ್ತೇವೆ ಎಂದರು.

ಸಿದ್ದರಾಮಯ್ಯ ವಿರುದ್ಧ  ಕಿಡಿ: 

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲೆಗಡುಕ ಎಂದು ಹೇಳಿದ್ದರು. ಆಗ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷ ಹೊರಗಡೆ ಹಾಕಬೇಕಿತ್ತು. ಇಂಥ ಕಾಂಗ್ರೆಸ್ಸಿಗರು ಯತ್ನಾಳ್ ವಿರುದ್ಧ ಪ್ರತಿಭಟನೆ ನಡೆಸುತ್ತಾರಂತೆ  ಎಂದು ಸಚಿವ ಈಶ್ವರಪ್ಪ ಕಿಡಿಕಾರಿದರು.

ಸಿದ್ದರಾಮಯ್ಯ ವಿಧಾನಸೌಧದ ಅಧಿವೇಶನ ನಡೆಯಲು ಬಿಡುವುದಿಲ್ಲ ಎನ್ನುತ್ತಿದ್ದಾರೆ. ಅದು ಹೇಗೆ ಅಧಿವೇಶನ ನಡೆಯಲು ಬಿಡುವುದಿಲ್ಲವೋ ನಾನು ನೋಡುತ್ತೇನೆ. ವಿಧಾನಸೌಧ ಅವರ ಸ್ವಂತ ಆಸ್ತಿಯಲ್ಲ. ಕಾಂಗ್ರೆಸ್ಸಿಗರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ವಿಧಾನಸೌಧವಿಲ್ಲ ಎಂದರು.

ಪಾಕಿಸ್ತಾನ ಝಿಂದಾಬಾದ್ ಎಂದವರ ಬಗ್ಗೆ ಖಂಡನಾ ಹೇಳಿಕೆ ನೀಡಿದರೆ ಸಿದ್ದರಾಮಯ್ಯ ಕೆಲಸ ಮುಗಿಯಿತು.

ಯತ್ನಾಳ್ ಹೇಳಿಕೆಗೆ ಸಂಬಂಧಿಸಿ ಧರಣಿ ಕೂರುತ್ತೀರಿ ಎಂದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ನಲ್ಲಿ ಎಷ್ಟು ಜನರಿದ್ದಾರೋ ಗೊತ್ತಿಲ್ಲ. ಇನ್ನೂ ನಿಮಗೆ ಕೆಪಿಸಿಸಿ ಅಧ್ಯಕ್ಷರನ್ನು ನೇಮಿಸಿಕೊಳ್ಳಲು ಆಗಿಲ್ಲ. ಇಂಥ ಕಾಂಗ್ರೆಸ್ ಯತ್ನಾಳ್ ವಿರುದ್ಧ ಧರಣಿ ಕೂರುತ್ತದೆಯಂತೆ ಎಂದು ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News