ಶಾಸಕ ಯತ್ನಾಳ್ ಗಡಿಪಾರಿಗೆ ಪ್ರಗತಿಪರ ಸಂಘಟನೆಗಳ ಆಗ್ರಹ

Update: 2020-02-27 06:32 GMT

ಶಿವಮೊಗ್ಗ, ಫೆ.27: ನಾಡಿನ‌ ಸಾಕ್ಷಿಪ್ರಜ್ಞೆ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ವಿರುದ್ದ ವಿವಾದಾತ್ಮಕ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಗಡಿಪಾರು ಮಾಡುವಂತೆ ಪ್ರಗತಿಪರ ಸಂಘಟನೆಗಳು ಆಗ್ರಹಿಸಿವೆ.

 ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿಯ ರಾಜ್ಯ ಸಂಚಾಲಕ ಡಿ.ಎಸ್.ಗುರುಮೂರ್ತಿ, ನಾಡಿನ ಹಿರಿಯ ಜೀವಿ ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟಗಾರರು ಎಂಬುದಕ್ಕೆ ಸಾಕಷ್ಟು ದಾಖಲೆಗಳಿವೆ. ಯತ್ನಾಳ್ ಈ ಬಗ್ಗೆ ಓದಿಕೊಂಡು, ತಿಳಿದುಕೊಂಡು ಆನಂತರ ಹೇಳಿಕೆ ಕೊಡಬೇಕು ಎಂದು ಹೇಳಿದರು.

ದೊರೆಸ್ವಾಮಿ ಅವರು ಅನ್ಯಾಯವಾದವರಿಗೆ ತಮ್ಮ ಅಹಿಂಸಾತ್ಮಕ ಮಾರ್ಗದ ಮೂಲಕ ಹೋರಾಟ ಮಾಡಿ ನ್ಯಾಯ ದೊರಕಿಸಿಕೊಡುವ ಕೆಲಸವನ್ನು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ಆದರೆ ಸಾಕಷ್ಟು ಕ್ರಿಮಿನಲ್ ಪ್ರಕರಣಗಳಿರುವ ಬಸವನಗೌಡ ಪಾಟೀಲ್ ಯತ್ನಾಳ್ ಅವರು ದೊರೆಸ್ವಾಮಿ ಅವರು ಪಾಕಿಸ್ತಾನದ ಏಜೆಂಟ್ ಎಂದು ಹೇಳಿಕೆ ನೀಡುವ ಮೂಲಕ ಬಿಜೆಪಿಯ ಒಳದ್ವನಿ ಬಹಿರಂಗಗೊಳಿಸಿದ್ದಾರೆ ಎಂದರು.

ಸಚಿವ ಸಿ.ಟಿ ರವಿ ಹಾಗೂ ಶಾಸಕ ಯತ್ನಾಳ್  ದೇಶದ ಸಮಗ್ರತೆ, ಐಕ್ಯ, ಶಾಂತಿ ಕದಡುವ ಹೇಳಿಕೆ ಕೊಡುತ್ತಿದ್ದರೂ ಗೃಹಸಚಿವ ಬಸವರಾಜ ಬೊಮ್ಮಾಯಿ ಮೌನ ವಹಿಸಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ ಎಂದರು.

ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗದಿದ್ದರೆ ಗೃಹಸಚಿವರು ರಾಜೀನಾಮೆ ಕೊಡುವುದು ಸೂಕ್ತ ಎಂದ ಅವರು, ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಸ್ವರಾಜ್ ಇಂಡಿಯಾ ಜಿಲ್ಲಾ ವಕ್ತಾರ ಕೆ.ಪಿ ಶ್ರೀಪಾಲ್ ಮಾತನಾಡಿ, ಬಸವನ ಗೌಡ ಪಾಟೀಲ್ ಯತ್ನಾಳ್ ವಿರುದ್ದ ಶಿವಮೊಗ್ಗ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತಿದ್ದೇವೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News