ಅನ್ಯ ಉದ್ದೇಶಕ್ಕೆ ಭದ್ರಾ ಜಲಾಶಯದ ನೀರು ಹರಿಸುವ ನಿರ್ಧಾರ ಹಿಂಪಡೆಯಲು ರೈತ ಸಂಘ ಆಗ್ರಹ

Update: 2020-03-02 05:48 GMT

ಶಿವಮೊಗ್ಗ, ಮಾ.2: ಅನ್ಯ ಉದ್ದೇಶಗಳಿಗೆ 6 ಟಿಎಂಸಿ ಭದ್ರಾ ಜಲಾಶಯದ ನೀರನ್ನು ಹರಿಸಲು ಭದ್ರಾ ಅಚ್ಚಕಟ್ಟು ಪ್ರಾಧಿಕಾರ ನಿರ್ಧಾರ ಮಾಡಿದೆ. ಈ ನಿರ್ಧಾರವನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಟಿ.ಗಂಗಾಧರ್, ಇಂತಹ ಸಾಹಸಕ್ಕೆ ಕೈ ಹಾಕಬೇಡಿ. ಆರು ಟಿಎಂಸಿ ನೀರನ್ನು ನದಿಗೆ ಹರಿಸುವ ನಿರ್ಧಾರವನ್ನು ಸರ್ಕಾರ ಕೂಡಲೆ ಹಿಂಪಡೆಯಬೇಕು. ಒಂದು ವೇಳೆ ನೀರು ಹರಿಸಲು ನಿರ್ಧರಿಸಿದ್ದೇ ಆದಲ್ಲಿ ಮುಂದೆ ಆಗುವ ಬೆಳೆ ನಷ್ಟದ ಹೊಣೆಯನ್ನು ಸರ್ಕಾರವೇ ಹೊರಬೇಕಾಗುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪ ಇದೇ ಜಿಲ್ಲೆಯವರಾಗಿದ್ದು, ಇಂತಹ ಸಾಹಸಕ್ಕೆ ಅವರು ಕೈ ಹಾಕಬಾರದು ಎಂದು ಒತ್ತಾಯಿಸಿದರು. 

ಎಷ್ಟೆಷ್ಟು ನೀರು ಯಾವುದಕ್ಕೆ ಬಳಕೆಯಾಗುತ್ತೆ?

ಜಲಾಶಯದಲ್ಲಿರುವ 53.090 ಟಿಎಂಸಿ ನೀರಿನ ಪೈಕಿ ಎಡ ಮತ್ತು ಬಲದಂಡೆ ನಾಲೆಗಳಿಗೆ 29 ಟಿಎಂಸಿ, ತರೀಕೆರೆ, ಭದ್ರಾವತಿ, ಹರಿಹರ, ರಾಣೆಬೆನ್ನೂರು ಸೇರಿದಂತೆ ಹಲವು ನಗರಗಳ ಕುಡಿಯುವ ನೀರು, ಕೈಗಾರಿಕೆ, ಜಲಚರಗಳಿಗಾಗಿ 7.048 ಟಿಎಂಸಿ, ಇಂಗುವ ನೀರಿನ ಪ್ರಮಾಣ 1.389 ಟಿಎಂಸಿ, ಜಲಾಶಯದಿಂದ ಆವಿಯಾಗುವ ನೀರು 1.500 ಟಿಎಂಸಿ, ಡೆಡ್ ಸ್ಟೋರೇಜ್ 13.830 ಇರುತ್ತದೆ. ಈಗ ಆರು ಟಿಎಂಸಿ ನೀರಿನ ಹೊರಗೆ ಹರಿಸಿದರೆ ಅಚ್ಚಕಟ್ಟು ವ್ಯಾಪ್ತಿಯ ರೈತರು ಬೆಳೆ ನಷ್ಟ ಅನುಭವಿಸಬೇಕಾಗುತ್ತದೆ ಎಂದು ರೈತ ಸಂಘ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News