ಹನೂರು: ಮೊದಲ ಮಳೆಗೇ ಚರಂಡಿಯಂತಾದ ರಸ್ತೆ; ಅಂಗಡಿಗಳಿಗೆ ನುಗ್ಗಿದ ತಾಜ್ಯ ನೀರು

Update: 2020-03-02 18:40 GMT

ಹನೂರು, ಮಾ.2: ಹನೂರು ತಾಲೂಕಿನ ವಿವಿಧೆಡೆ ಸೋಮವಾರ ಸಂಜೆ ಕೆಲ ಕಾಲ ಸುರಿದ ಮಳೆಗೆ ಕೌದಳ್ಳಿ ಗ್ರಾಮದ ಮಲೆಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯಲ್ಲಿ ಮಳೆ ನೀರು ಚರಂಡಿಯಲ್ಲಿ ಸರಾಗವಾಗಿ ಹರಿಯದೆ, ರಸ್ತೆಯಲ್ಲೇ ಹರಿದಿದ್ದು, ಸಾರ್ವಜನಿಕರು ಸಂಕಷ್ಟಕ್ಕೊಳಗಾದರು.

ಕೌದಳ್ಳಿ ಗ್ರಾಮದಲ್ಲಿ ಪ್ರತಿ ಬಾರಿಯೂ ಮಳೆ ಸುರಿದಾಗ ಚರಂಡಿಯಲ್ಲಿ ಮಳೆ ನೀರು ಸರಾಗವಾಗಿ ಹರಿಯದೆ ಈ ರೀತಿಯ ಸಮಸ್ಯೆ ಪುನರಾವರ್ತನೆಯಾಗುತ್ತಿದ್ದು, ಸಮಸ್ಯೆಯನ್ನು ಶಾಶ್ವತವಾಗಿ ತೊಡೆದು ಹಾಕಲು ಈ ಭಾಗದ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ಗ್ರಾಮಸ್ಥರು ಆಳಲನ್ನು ತೋಡಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಕೌದಳ್ಳಿ ಗ್ರಾಮಸ್ಥ ನೂರುಲ್ಲಾ ಮಾತನಾಡಿ, ಮಳೆ ಬಂದಾಗ ಚರಂಡಿಗಳು ತುಂಬಿ ರಸ್ತೆಯಲ್ಲೇ ನೀರು ಹರಿಯುತ್ತದೆ. ಇದರಿಂದ ಸಮೀಪದ ಅಂಗಡಿಗಳಿಗೆ ತಾಜ್ಯ ನೀರು ನುಗ್ಗುತ್ತದೆ. ಈ ಬಗ್ಗೆ ಈಗಲೇ ಮುನ್ನುಚ್ಚರಿಕೆ ವಹಿಸದಿದ್ದರೆ ಭಾರೀ ಮಳೆ ಬಂದಾಗ ಮತ್ತೆ ಭಾರಿ ಅವಘಡಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಗ್ರಾಮ ಪಂಚಾಯತ್ ಅಧಿಕಾರಿಗಳು ಮತ್ತು ಸದಸ್ಯರು ಎಚ್ಚೆತ್ತು ಈಗಲೇ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News