ಫಡ್ನವೀಸ್‍ ಗೆ ಸುಪ್ರೀಂ ಕೋರ್ಟ್ ನಲ್ಲಿ ಹಿನ್ನಡೆ: ಮಹಾರಾಷ್ಟ್ರ ಮಾಜಿ ಸಿಎಂಗೆ ಮತ್ತೆ ಸಂಕಷ್ಟ

Update: 2020-03-03 09:26 GMT

ಹೊಸದಿಲ್ಲಿ: ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರಿಗೆ ಹಿನ್ನಡೆಯುಂಟು ಮಾಡುವ ಬೆಳವಣಿಗೆಯೊಂದರಲ್ಲಿ ಸುಪ್ರೀಂ ಕೋರ್ಟ್ ಇಂದು ನೀಡಿದ ಆದೇಶದಲ್ಲಿ ಅವರ ವಿರುದ್ಧ ಕ್ರಿಮಿನಲ್ ವಿಚಾರಣೆ ಮುಂದುವರಿಯಬೇಕೆಂಬ ತನ್ನ ಹಿಂದಿನ  ಆದೇಶವನ್ನು ಮರುಪರಿಶೀಲಿಸಲು ನಿರಾಕರಿಸಿದೆ.

2014ರಲ್ಲಿ ಸಲ್ಲಿಸಲಾದ ತಮ್ಮ ಚುನಾವಣಾ ಅಫಿಡವಿಟ್‍ನಲ್ಲಿ ತಮ್ಮ ವಿರುದ್ಧ 1996 ಹಾಗೂ 1998ರಲ್ಲಿ ದಾಖಲಾಗಿದ್ದ ವಂಚನೆ ಹಾಗೂ ಫೋರ್ಜರಿ ಕೇಸುಗಳ ಕುರಿತು ಮಾಹಿತಿ ನೀಡದೇ ಇರುವ ಪ್ರಕರಣ ಕುರಿತಂತೆ ಫಡ್ನವೀಸ್ ಅವರಿಗೆ ವಿಚಾರಣೆ ಎದುರಿಸುವುದು ಅನಿವಾರ್ಯವಾಗಲಿದೆ.

ಫಡ್ನವೀಸ್ ವಿರುದ್ಧ ಇದ್ದ ಎರಡು ಕ್ರಿಮಿನಲ್ ಪ್ರಕರಣಗಳ ಕುರಿತಂತೆ ಅವರು 2014ರ ಅಫಿಡವಿಟ್‍ನಲ್ಲಿ ಮಾಹಿತಿ ನೀಡಿಲ್ಲ ಎಂದು ನಾಗ್ಪುರ ಮೂಲದ ವಕೀಲ ಸತೀಶ್ ಉಕೆ ಅವರ ವಿರುದ್ಧ ಕಳೆದ ವರ್ಷ ಪ್ರಕರಣ ದಾಖಲಿಸಿದ್ದರು. ಇದರ ವಿರುದ್ಧ ಫಡ್ನವೀಸ್ ಅಪೀಲು ಸಲ್ಲಿಸಿದ್ದರೂ ಅದನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಮುಂದೆ ಬಾಂಬೆ ಹೈಕೋರ್ಟ್ ಕೂಡ ಇದೇ ಆದೇಶ ಎತ್ತಿ ಹಿಡಿದಿತ್ತು. ಇದರ ವಿರುದ್ಧ ಫಡ್ನವೀಸ್ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರೂ ಅಕ್ಟೋಬರ್‍ನಲ್ಲಿ ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಪಡ್ನವೀಸ್ ವಿರುದ್ಧ ವಿಚಾರಣೆಗೆ ಸ್ಥಳೀಯ ನ್ಯಾಯಾಲಯಕ್ಕೆ ಅನುಮತಿ ನೀಡಿತ್ತು. ಇದೀಗ ನ್ಯಾಯಾಲಯ ತನ್ನ ಹಿಂದಿನ ಆದೇಶ ಮರುಪರಿಶೀಲನೆ ನಡೆಸಲು ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News