ಸ್ಪೀಕರ್ ಕಾಗೇರಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಿರುವ ಕಾಂಗ್ರೆಸ್

Update: 2020-03-03 15:53 GMT

ಬೆಂಗಳೂರು, ಮಾ. 3: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಕುರಿತ ಬಿಜೆಪಿ ಶಾಸಕ ಯತ್ನಾಳ್ ನೀಡಿದ್ದ ಅವಹೇಳನಕಾರಿ ಹೇಳಿಕೆ ಖಂಡಿಸಿ ವಿಪಕ್ಷ ಕಾಂಗ್ರೆಸ್ ಮತ್ತೊಂದು ಸುತ್ತಿನ ಹೋರಾಟಕ್ಕೆ ಮುಂದಾಗಿದ್ದು, ನಾಳೆ (ಮಾ.4) ರಾಜ್ಯಪಾಲರಿಗೆ ದೂರು ನೀಡಲು ತೀರ್ಮಾನಿಸಿದೆ.

ನಾಳೆ ಬೆಳಗ್ಗೆ 10:45ಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ಮತ್ತು ಮೇಲ್ಮನೆ ಸದಸ್ಯರ ನಿಯೋಗ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಧೋರಣೆಯನ್ನು ಖಂಡಿಸಿ, ರಾಜ್ಯಪಾಲರಿಗೆ ದೂರು ನೀಡಲಿದೆ.

ದೊರೆಸ್ವಾಮಿ ಅವರ ಕುರಿತ ಹೇಳಿಕೆ ಸಂಬಂಧ ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ನಿರಾಕರಿಸುತ್ತಿರುವ ಸ್ಪೀಕರ್ ಕಾಗೇರಿ ಧೋರಣೆ ಸಲ್ಲ. ಅವರು ಸರಕಾರದ ಒತ್ತಡಕ್ಕೆ ಮಣಿದು ಚರ್ಚೆಗೆ ಅವಕಾಶ ನಿರಾಕರಿಸಿದ್ದಾರೆ. ಹೀಗಾಗಿ ಸಂವಿಧಾನ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ತಾವು, ಸ್ಪೀಕರ್ ಅವರಿಗೆ ಸೂಚನೆ ನೀಡಬೇಕೆಂದು ಕಾಂಗ್ರೆಸ್ ನಿಯೋಗ ಮನವಿ ಮಾಡುವ ಸಾಧ್ಯತೆಗಳಿವೆ.

‘ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಸ್ಪೀಕರ್ ಕಾಗೇರಿ ಅವರೇ ಪ್ರಮಾಣ ವಚನ ಬೋಧನೆ ಮಾಡಿದ್ದಾರೆ. ಹೀಗಾಗಿ ಸರಕಾರದ ಒತ್ತಡಕ್ಕೆ ಮಣಿದು ಸ್ಪೀಕರ್, ವಿಚಾರ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಹೀಗಾಗಿ ನಾವು ರಾಜ್ಯಪಾಲರನ್ನು ಭೇಟಿ ಮಾಡಲಿದ್ದೇವೆ’

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News