ಪುಲ್ವಾಮ ದಾಳಿ ಪ್ರಕರಣ: ಉಗ್ರರಿಗೆ ನೆರವು ಆರೋಪದಲ್ಲಿ ತಂದೆ, ಮಗಳ ಬಂಧನ

Update: 2020-03-03 17:43 GMT
ಫೈಲ್ ಚಿತ್ರ

ಹೊಸದಿಲ್ಲಿ, ಮಾ. 3: ಪುಲ್ವಾಮ ಭಯೋತ್ಪಾದಕ ದಾಳಿಗೆ ಸಂಬಂಧಿಸಿ ಪುಲ್ವಾಮ ನಿವಾಸಿ ಹಾಗೂ ಆತನ ಪುತ್ರಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ಬಂಧಿಸಿದೆ.

 ಸಿಆರ್‌ಪಿಎಫ್ ಸರಣಿ ವಾಹನಗಳ ಮೇಲೆ ಸ್ಫೋಟ ತುಂಬಿದ ಕಾರು ಢಿಕ್ಕಿ ಹೊಡೆಸಿ ಸ್ಫೋಟಿಸಿದ ಜೈಶೆ ಮುಹಮ್ಮದ್‌ನ ಉಗ್ರ ಆದಿಲ್ ಅಹ್ಮದ್ ದಾರ್ ವೀಡಿಯೊ ಮಾಡಿದ ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಹಕ್ರಿಪೋರಾದಲ್ಲಿರುವ ಮನೆಯಲ್ಲಿ ಎನ್‌ಐಎ ದಾಳಿ ನಡೆಸಿ ತಾರಿಕ್ ಅಹ್ಮದ್ ಶಾ ಹಾಗೂ ಆತನ ಪುತ್ರಿ ಇನ್ಸಾ (23) ಳನ್ನು ಬಂಧಿಸಿದೆ.

ವೃತ್ತಿಯಲ್ಲಿ ಟ್ರಕ್ ಚಾಲಕನಾಗಿರುವ ಶಾ, ತನ್ನ ಮನೆಯನ್ನು ಆದಿಲ್ ಅಹ್ಮದ್ ದಾರ್, ಪಾಕಿಸ್ತಾನದ ಉಗ್ರ ಹಾಗೂ ಐಇಡಿ ತಯಾರಿಸಿದ ಮುಹಮ್ಮದ್ ಉಮ್ಮರ್ ಫಾರೂಕ್, ಇನ್ನೋರ್ವ ಪಾಕಿಸ್ತಾನದ ಉಗ್ರ ಕಮ್ರಾನ್ (ಇಬ್ಬರೂ ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ಹತರಾದರು), ಜೈಶೆ ಮುಮಮ್ಮದ್‌ನ ಪುಲ್ವಾಮದ ಉಗ್ರ ಸಮೀರ್ ಅಹ್ಮದ್ ದಾರ್, ಪಾಕಿಸ್ತಾನದ ಉಗ್ರ ಇಸ್ಮಾಯಿಲ್, ಇಬ್ರಾಹಿಂ ಆಲಿಯಾಸ್ ಅದ್ನಾನ್ ಬಳಸಿದ್ದರು ಎಂದು ಹೇಳಿದ್ದಾನೆ.

 ಶಾ ತನ್ನ ಮನೆಯಲ್ಲಿ ತಂಗಲು ಭಯೋತ್ಪಾದಕರಿಗೆ ಅವಕಾಶ ನೀಡಿದ್ದ. ಇಲ್ಲಿ ಅವರು ಸಿಆರ್‌ಪಿಎಫ್ ವಾಹನಗಳ ಮೇಲೆ ಕಾರು ಬಾಂಬ್ ದಾಳಿ ನಡೆಸುವ ಯೋಜನೆ ರೂಪಿಸಿದ್ದರು. ಆತ್ಮಾಹುತಿ ಬಾಂಬರ್ ಆದಿಲ್ ಅಹ್ಮದ್ ದಾರ್ ಇಲ್ಲಿ ವೀಡಿಯೊ ದಾಖಲಿಸಿಕೊಂಡಿದ್ದ. ಪುಲ್ವಾಮ ದಾಳಿ ನಡೆದ ಕೂಡಲೇ ಈ ವೀಡಿಯೊವನ್ನು ಜೈಶೆ ಮುಹಮ್ಮದ್ ಪಾಕಿಸ್ತಾನದಲ್ಲಿ ಬಿಡುಗಡೆ ಮಾಡಿತ್ತು ಎಂದು ಎನ್‌ಐಎ ವಕ್ತಾರರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News