ಪ್ರವಾಹದ ಹಾನಿಯ ಬಳಿಕ ಪುಟಿದೆದ್ದ ಕೇರಳ

Update: 2020-03-06 04:04 GMT

ತಿರುವನಂತಪುರಂ, ಮಾ.6: ಭೀಕರ ಪ್ರವಾಹದಿಂದ ತತ್ತರಿಸಿದ್ದ ಕೇರಳ ರಾಜ್ಯದ ಪ್ರವಾಸೋದ್ಯಮ ಮತ್ತೆ ಪುಟಿದೆದ್ದಿದೆ. 24 ವರ್ಷಗಳಲ್ಲೇ ಗರಿಷ್ಠ ಸಂಖ್ಯೆಯ ಪ್ರವಾಸಿಗಳನ್ನು ಆಕರ್ಷಿಸಿದ್ದು, ರಾಜ್ಯದ ಪ್ರವಾಸೋದ್ಯಮದಲ್ಲಿ ಜೀವ ಕಳೆ ಕಾಣಿಸಿಕೊಂಡಿದೆ. 2019ರಲ್ಲಿ ಒಟ್ಟು 1.69 ಕೋಟಿ ದೇಶೀಯ ಹಾಗೂ ವಿದೇಶಿ ಪ್ರವಾಸಿಗಳು ಕೇರಳಕ್ಕೆ ಭೇಟಿ ನೀಡಿದ್ದಾರೆ.

ಈ ಅವಧಿಯಲ್ಲಿ 17.2 ಶೇಕಡ ಪ್ರಗತಿ ದಾಖಲಾಗಿದ್ದು, 1.83 ಕೋಟಿ ದೇಶೀಯ ಹಾಗೂ 11.89 ಲಕ್ಷ ವಿದೇಶಿ ಅತಿಥಿಗಳನ್ನು ಆಕರ್ಷಿಸಿದೆ. ಪ್ರವಾಸೋದ್ಯಮದಿಂದ ಒಟ್ಟು 45010.69 ಕೋಟಿ ಆದಾಯ ಬಂದಿದೆ ಎಂದು ಪ್ರಕಟನೆ ಹೇಳಿದೆ.

2018ರಲ್ಲಿ 1.56 ಕೋಟಿ ದೇಶಿ ಪ್ರವಾಸಿಗರು ಮತ್ತು 10.96 ಲಕ್ಷ ವಿದೇಶಿ ಅತಿಥಿಗಳು ಭೇಟಿ ನೀಡಿದ್ದರು. "2018 ಮತ್ತು 2019ರಲ್ಲಿ ಸತತ ಎರಡು ವರ್ಷಗಳ ಕಾಲ ವ್ಯಾಪಕ ಪ್ರವಾಹ ಮತ್ತು ಧಾರಾಕಾರ ಮಳೆಯಿಂದ ಆದ ಹಾನಿಯಿಂದ ನಾವು ಪುಟಿದೆದ್ದಿದ್ದೇವೆ. ಕಳೆದ 1996ರ ಬಳಿಕ ಗರಿಷ್ಠ ಮಟ್ಟದ ಪ್ರಗತಿ ದಾಖಲಾಗಿದೆ. 2019ರ ಮೇ ತಿಂಗಳಿನಿಂದ ವರ್ಷದ ಕೊನೆಯವರೆಗೂ ಪ್ರವಾಸಿಗಳ ಸಂಖ್ಯೆ ಗರಿಷ್ಠವಾಗಿತ್ತು" ಎಂದು ಪ್ರವಾಸೋದ್ಯಮ ಖಾತೆ ಸಚಿವ ಕಡಕಂಪಲ್ಲಿ ಸುರೇಂದ್ರನ್ ಹೇಳಿದ್ದಾರೆ.

ಈ ವರ್ಷ ಕೂಡಾ ಸುಸ್ಥಿರ ಬೆಳವಣಿಗೆ ಮುಂದುವರಿಯಲಿದೆ ಎಂಬ ನಿರೀಕ್ಷೆ ನಮ್ಮದು. ಆದರೆ ಇದು ಕೊರೋನ ವೈರಸ್ ದಾಳಿಯಿಂದ ಕಂಗೆಟ್ಟಿರುವ ಜಗತ್ತು ಹೇಗೆ ಚೇತರಿಸಿಕೊಳ್ಳುತ್ತದೆ ಎನ್ನುವ ಮೇಲೆ ಇದು ಅವಲಂಬಿಸಿದೆ ಎಂದು ವಿವರಿಸಿದ್ದಾರೆ. 14 ಜಿಲ್ಲೆಗಳ ಪೈಕಿ ಎರ್ನಾಕುಲಂ (45. 82 ಲಕ್ಷ), ತಿರುವನಂತಪುರಂ (33.48 ಲಕ್ಷ), ತ್ರಿಶ್ಶೂರ್ (25.99 ಲಕ್ಷ) ಹಾಗೂ ಇಡುಕ್ಕಿ (18.95 ಲಕ್ಷ) ಗರಿಷ್ಠ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News