ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ದೋಖಾ ?: ಝಮೀರ್ ಅಹ್ಮದ್ ಬಿಚ್ಚಿಟ್ಟ 'ಅನುದಾನ ಕಡಿತ'ದ ಮಾಹಿತಿ ಇಲ್ಲಿವೆ...

Update: 2020-03-06 12:11 GMT

ಬೆಂಗಳೂರು, ಮಾ.6: ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿರುವ 2020-21ನೆ ಸಾಲಿನ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಕಳೆದ ಸಾಲಿನ ಬಜೆಟ್‌ಗೆ ಹೋಲಿಸಿದ್ದಲ್ಲಿ ಶೇ.36ರಷ್ಟು ಅನುದಾನ ಕಡಿತ ಮಾಡಲಾಗಿದೆ ಎಂದು ಮಾಜಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ವಿಧಾನಸಭೆಯ ವಿರೋಧ ಪಕ್ಷದ ಮೊಗಸಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2019-20ನೆ ಸಾಲಿನ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಗೆ 1985.86 ಕೋಟಿ ರೂ.ಗಳನ್ನು ಒದಗಿಸಲಾಗಿತ್ತು. ಆದರೆ, ಈ ಬಾರಿ ಕೇವಲ 1278.30 ಕೋಟಿ ರೂ.ಗಳನ್ನು ನೀಡಿದ್ದಾರೆ(707.56 ಕೋಟಿ ರೂ.ಕಡಿತ) ಎಂದರು.

ಬಿದಾಯಿ ಯೋಜನೆ(ಶಾದಿ ಭಾಗ್ಯ)ಗೆ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಸರಕಾರದಲ್ಲಿ 60 ಕೋಟಿ ರೂ.ಗಳನ್ನು ಒದಗಿಸಲಾಗಿತ್ತು. ಇನ್ನು ಸುಮಾರು 33 ಸಾವಿರ ಅರ್ಜಿಗಳು ಬಾಕಿಯಿವೆ. ಅವುಗಳನ್ನು ಇತ್ಯರ್ಥಪಡಿಸಲು 160 ಕೋಟಿ ರೂ.ಗಳ ಅಗತ್ಯವಿತ್ತು. ಆದರೆ, ಈ ಬಾರಿ ಬಜೆಟ್‌ನಲ್ಲಿ ಬಿದಾಯಿ ಯೋಜನೆಯನ್ನೆ ಕೈ ಬಿಡಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕೌಶಲ್ಯ ಅಭಿವೃದ್ಧಿ ಯೋಜನೆಗಾಗಿ ಕಳೆದ ವರ್ಷ 8 ಕೋಟಿ ರೂ.ಗಳನ್ನು ಒದಗಿಸಲಾಗಿತ್ತು. ಈ ಬಾರಿ ಯೋಜನೆಯನ್ನೆ ಕೈ ಬಿಡಲಾಗಿದೆ. ಮಕ್ಕಳ ವಿದ್ಯಾರ್ಥಿ ವೇತನಕ್ಕಾಗಿ ನೀಡಲಾಗುತ್ತಿದ್ದ 275 ಕೋಟಿ ರೂ.ಗಳಲ್ಲಿ 175 ಕೋಟಿ ರೂ.ಕಡಿತ ಮಾಡಿ, ಕೇವಲ 100 ಕೋಟಿ ರೂ.ನೀಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮದ್ರಸಾಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಕಳೆದ ಸರಕಾರ 30 ಕೋಟಿ ರೂ.ಗಳನ್ನು ನೀಡಿತ್ತು. ಈ ಬಾರಿ ಬಜೆಟ್‌ನಲ್ಲಿ ಕೇವಲ 10 ಕೋಟಿ ರೂ. ನೀಡಲಾಗಿದೆ. ಮುಖ್ಯಮಂತ್ರಿಯ ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಗೆ ಕಳೆದ ಬಾರಿ 400 ಕೋಟಿ ರೂ.ನೀಡಲಾಗಿತ್ತು. ಈ ಬಾರಿ 200 ಕೋಟಿ ರೂ.ಗಳಿಗೆ ಇಳಿಸಲಾಗಿದೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಅಲ್ಪಸಂಖ್ಯಾತರಿಗಾಗಿ ಸಮುದಾಯ ಭವನ, ಶಾದಿ ಮಹಲ್‌ಗಳ ನಿರ್ಮಾಣಕ್ಕಾಗಿ ಕಳೆದ ಬಾರಿ 20 ಕೋಟಿ ರೂ.ಗಳನ್ನು ಒದಗಿಸಲಾಗಿತ್ತು. ಆದರೆ, ಈ ಬಾರಿ ಯಾವುದೇ ಅನುದಾನ ನೀಡಿಲ್ಲ. ಅರಿವು ಸಾಲ ಯೋಜನೆ, ಗಂಗಾ ಕಲ್ಯಾಣ, ಭೂ ಖರೀದಿಗೆ ನೀಡುವ ಸಾಲ ಯೋಜನೆಗಳಿಗಾಗಿ ಕಳೆದ ಬಾರಿ 144 ಕೋಟಿ ರೂ.ಗಳನ್ನು ನೀಡಲಾಗಿತ್ತು. ಈ ಬಾರಿ ಅದನ್ನು 70 ಕೋಟಿ ರೂ.ಗಳಿಗೆ ಇಳಿಸಲಾಗಿದೆ ಎಂದು ಅವರು ವಿವರಣೆ ನೀಡಿದರು.

ಮೈಕ್ರೋ ಲೋನ್ ಯೋಜನೆಗೆ ಕಳೆದ ಬಾರಿ 83 ಕೋಟಿ ರೂ.ನೀಡಲಾಗಿತ್ತು. ಈ ಬಾರಿ ಅದನ್ನು 55 ಕೋಟಿ ರೂ.ಗಳಿಗೆ ಇಳಿಸಿದ್ದಾರೆ. ವಕ್ಫ್ ಬೋರ್ಡ್‌ಗೆ ಸೇರಿದ ಮಸೀದಿಗಳಲ್ಲಿನ ಇಮಾಮ್ ಹಾಗೂ ಮುಅಝ್ಝಿನ್ ಗಳಿಗೆ ಗೌರವ ಧನ ನೀಡಲು ಕಳೆದ ಬಾರಿ 65 ಕೋಟಿ ರೂ.ಒದಗಿಸಲಾಗಿತ್ತು. ಈ ಬಾರಿ 55 ಕೋಟಿ ರೂ.ಗಳಿಗೆ ಇಳಿಸಿದ್ದಾರೆ ಎಂದು ಅವರು ಕಿಡಿಗಾರಿದರು.

ಅಲ್ಪಸಂಖ್ಯಾತರ ಆಯೋಗದ ಸಿಬ್ಬಂದಿಗಳಿಗೆ ವೇತನ ನೀಡಲು ಕಳೆದ ಬಾರಿ ಬಜೆಟ್‌ನಲ್ಲಿ 1.88 ಕೋಟಿ ರೂ.ನೀಡಲಾಗಿತ್ತು. ಈ ಬಾರಿ ಕೇವಲ 1 ಕೋಟಿ ರೂ.ನೀಡಿದ್ದಾರೆ. ಈ ಬಜೆಟ್ ಬಗ್ಗೆ ಸರಕಾರದ ಸಮರ್ಥನೆಗೆ ನಿಂತಿರುವ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್, ಉಳಿದ 88 ಲಕ್ಷ ರೂ.ಗಳನ್ನು ಹೇಗೆ ಹೊಂದಿಸಿಕೊಳ್ಳುತ್ತಾರೆ ಎಂದು ಝಮೀರ್ ಅಹ್ಮದ್ ಖಾನ್ ಪ್ರಶ್ನಿಸಿದರು.

ಉರ್ದು ಅಕಾಡೆಮಿಗೆ ಕಳೆದ ಬಾರಿ 2.15 ಕೋಟಿ ರೂ.ನೀಡಲಾಗಿತ್ತು. ಅದನ್ನು 1 ಕೋಟಿ ರೂ.ಗಳಿಗೆ ಇಳಿಸಿದ್ದಾರೆ. ಅಲ್ಪಸಂಖ್ಯಾತರಿಗೆ ಬಜೆಟ್‌ನಲ್ಲಿ ಯಾವುದೇ ಅನ್ಯಾಯ ಮಾಡುವುದಿಲ್ಲ ಎಂದು ಹೇಳಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಕಳೆದ ಬಾರಿಯ ಬಜೆಟ್‌ಗಿಂತ 707 ಕೋಟಿ ರೂ.ಗಳಷ್ಟು ಅನುದಾನ ಕಡಿತ ಮಾಡಿದ್ದು ಸರಿಯಲ್ಲ. ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದು ಅವರು ಹೇಳಿದರು.

ಹಜ್‌ ಭವನಕ್ಕೆ ಕೇವಲ 2 ಕೋಟಿ ರೂ.

ಪ್ರಸಕ್ತ ಸಾಲಿನ ಹಜ್‌ ಯಾತ್ರಿಗಳ ಆಯ್ಕೆ ಕಾರ್ಯಕ್ರಮ(ಖುರ್ರಾ)ದಲ್ಲಿ ಪಾಲ್ಗೊಂಡಿದ್ದ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ, ಹಜ್ ಭವನಕ್ಕೆ 5 ಕೋಟಿ ರೂ.ನೀಡುವುದಾಗಿ ಮಾತುಕೊಟ್ಟಿದ್ದರು. ಆದರೆ, ಬಜೆಟ್‌ನಲ್ಲಿ ಕೇವಲ 2 ಕೋಟಿ ರೂ.ಕೊಟ್ಟಿದ್ದಾರೆ. ಕಳೆದ ಸಾಲಿನ ಬಜೆಟ್‌ನಲ್ಲಿ ನಮ್ಮ ಸರಕಾರ ಹಜ್ ಭವನಕ್ಕೆ 2.50 ಕೋಟಿ ರೂ.ಕೊಟ್ಟಿತ್ತು.

-ಝಮೀರ್ ಅಹ್ಮದ್ ಖಾನ್, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News