ಸಂತ್ರಸ್ತ ರೈತರ ಕಡೆಗಣನೆ ಆರೋಪ: ಮಡಿಕೇರಿಯಲ್ಲಿ ರೈತ ಸಂಘ, ಹಸಿರು ಸೇನೆಯಿಂದ ಪ್ರತಿಭಟನೆ

Update: 2020-03-06 12:18 GMT

ಮಡಿಕೇರಿ, ಮಾ.6: ಪ್ರಾಕೃತಿಕ ವಿಕೋಪದಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತ ರೈತರಿಗೆ ಪುನರ್ವಸತಿ ಹಾಗೂ ಪರಿಹಾರ ಕಲ್ಪಿಸುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನಗರದಲ್ಲಿ ಪ್ರತಿಭಟನೆ ನಡೆಸಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಮನುಸೋಮಯ್ಯ ಮಾತನಾಡಿ, ಸೋಮವಾರಪೇಟೆ ತಾಲೂಕಿನ ಕುಂಬಾರಗಡಿಗೆ ಮತ್ತು ಕಾಲೂರು ವ್ಯಾಪ್ತಿಯ ರೈತರು ಮಳೆಹಾನಿ ಪರಿಹಾರ ಹಾಗೂ ಮೂಲಭೂತ ಸೌಲಭ್ಯ ದೊರೆಯದೆ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರಾಕೃತಿ ವಿಕೋಪ ಸಂಭವಿಸಿ ವರ್ಷಗಳೇ ಕಳೆದರೂ ಸೂಕ್ತ ಪರಿಹಾರ ಕಲ್ಪಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿದರು.

ರೈತ ಕುಟುಂಬಗಳ ವಾಸ್ತವಾಂಶವನ್ನು ತಿಳಿಯುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ರೈತ ಸಂಘದ ಪದಾಧಿಕಾರಿಗಳು ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಿ ಗ್ರಾಮ ಲೆಕ್ಕಿಗರು, ಕಂದಾಯ ಪರಿವೀಕ್ಷಕರು, ತಹಶೀಲ್ದಾರರು ಹಾಗೂ ಅರಣ್ಯ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ಹಲವು ಬಾರಿ ಸಂತ್ರಸ್ತರ ಸಮಸ್ಯೆಗಳ ಬಗ್ಗೆ ರೈತಸಂಘ ಜಿಲ್ಲಾಡಳಿತದ ಗಮನ ಸೆಳೆದಿದ್ದರೂ, ಇಲ್ಲಿಯವರೆಗೆ ಸ್ಪಂದನೆ ದೊರೆತಿಲ್ಲ ಎಂದು ಮನುಸೋಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಈ ಬಾರಿಯೂ ಮಳೆ ಹೆಚ್ಚಾದರೆ ಅನೇಕ ಮನೆಗಳು ಧರೆಗುರುಳುವ ಸಾಧ್ಯತೆ ಹೆಚ್ಚಿದ್ದು, ಗೋಡೆಗಳು ಬೀಳದಂತೆ ಪ್ಲಾಸ್ಟಿಕ್ ಶೀಟ್‍ಗಳನ್ನು ಅಳವಡಿಸಿ ಆತಂಕದಿಂದಲೇ ಜೀವನ ಸಾಗಿಸುವಂತಾಗಿದೆ. ಇನ್ನಾದರು ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಜಿಲ್ಲೆಯ ಮೂಲ ನಿವಾಸಿಗಳ ನೋವುಗಳಿಗೆ ಸ್ಪಂದಿಸಬೇಕು, ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಪ್ರಮುಖರಾದ ಮೋಟಯ್ಯ ಮಾತನಾಡಿ, ಸ್ಥಳೀಯ ಮೂಲನಿವಾಸಿಗಳ ನೈಜ ಸಮಸ್ಯೆಗಳಿಗೆ ಆಡಳಿತ ವ್ಯವಸ್ಥೆಯಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ. 
ಹೊರ ರಾಜ್ಯದಿಂದ ಬಂದವರಿಗೆ ಪುನರ್ವಸತಿ ಕಲ್ಪಿಸಲಾಗುತ್ತಿದೆ, ಆದರೆ 200-300 ವರ್ಷಗಳಿಂದ ಇಲ್ಲಿಯೇ ಇರುವ ಮೂಲ ನಿವಾಸಿ ಬುಡಕಟ್ಟು ಜನಾಂಗ ವಸತಿ ಸೌಲಭ್ಯವಿಲ್ಲದೆ ತೊಂದರೆ ಅನುಭವಿಸುತ್ತಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಸುಜಾ ಬೋಪಯ್ಯ, ಜಿಲ್ಲಾ ಸಂಚಾಲಕ ಪಿ.ಟಿ.ಸುಭಾಷ್, ಹೋಬಳಿ ಸಂಚಾಲಕ ಮಂಜುನಾಥ್, ಮಂಡೇಪಂಡ ಪ್ರವೀಣ್, ಪುಚ್ಚಿಮಾಡ ರಾಯ್ ಮಾದಪ್ಪ, ತೀತಮಾಡ ರಾಜ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾಧಿಕಾರಿ ಭರವಸೆ
ಪ್ರತಿಭಟನಾಕಾರರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಕೆಲವೇ ದಿನಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸುವುದಾಗಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News