ಸಿಎಎಯಲ್ಲಿ ವಿದೇಶಿಗಳ ಹಸ್ತಕ್ಷೇಪ: ಆರ್ ಟಿಐಯಲ್ಲಿ ತನ್ನ ಹೇಳಿಕೆ ಬಗ್ಗೆ ಉಲ್ಟಾ ಹೊಡೆದ ಕೇಂದ್ರ!

Update: 2020-03-07 15:49 GMT

ಸಿಎಎ ಭಾರತದ ಆಂತರಿಕ ವಿಚಾರವೆಂದು ಹೇಳಿದ್ದ ಮೋದಿ ಸರಕಾರ ಆರ್‌ಟಿಐ ಅರ್ಜಿಗೆ ನೀಡಿದ ಉತ್ತರವೊಂದರಲ್ಲಿ ಸಿಎಎ ಕರಡು ಪ್ರತಿಯ ವಿವರಗಳನ್ನು ಬಹಿರಂಗಪಡಿಸುವುದರಿಂದ ವಿದೇಶಗಳ ಜೊತೆಗಿನ ಬಾಂಧವ್ಯಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆಯೆಂದು ಹೇಳುವ ಮೂಲಕ ದ್ವಂದ್ವ ನಿಲುವು ಪ್ರದರ್ಶಿಸಿದೆ ಎಂದು ಸುದ್ದಿಜಾಲತಾಣ ‘huffpost india' ತನ್ನ ವರದಿಯಲ್ಲಿ ತಿಳಿಸಿದೆ.

ಹೊಸದಿಲ್ಲಿ,ಮಾ.7: ‘ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)’ ಭಾರತದ ಆಂತರಿಕ ವಿಷಯವಾಗಿದ್ದು, ಇತರ ದೇಶಗಳು ಇದರಲ್ಲಿ ಮಧ್ಯಪ್ರವೇಶಿಸುವ ಹಾಗಿಲ್ಲ’’ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಪ್ರತಿಪಾದಿಸಿದ್ದರು. ವಿವಾದಾತ್ಮಕ ಸಿಎಎ ಕಾಯ್ದೆಯನ್ನು ಪ್ರಶ್ನಿಸಿ ವಿಶ್ವಸಂಸ್ಥೆಯ ಮಾನವಹಕ್ಕುಗಳ ಹೈಕಮೀಶನರ್ ಮಿಶೆಲ್ ಬ್ಯಾಶೆಲೆಟ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದರ ವಿರುದ್ಧ ಅವರು ಹೀಗೆ ಪ್ರತಿಕ್ರಿಯಿಸಿದ್ದರು. ಆದಾಗ್ಯೂ, ರವೀಶ್ ಕುಮಾರ್ ಈ ಬಹಿರಂಗ ಹೇಳಿಕೆ ನೀಡಿದ, ಕೇವಲ ಒಂದು ದಿನದ ಹಿಂದೆ, ಸಿಎಎ ಕಾಯ್ದೆಯ ಕರಡು ಪ್ರತಿ ರಚನೆಗೆ ಸಂಬಂಧಿಸಿದ ಕಡತಗಳ ವಿವರಗಳನ್ನು ಪಡೆಯಲು ಸುದ್ದಿಜಾಲತಾಣ ಸಂಸ್ಥೆ ‘huffpost india'  ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿಗೆ ಉತ್ತರಿಸಲು ನಿರಾಕರಿಸಿದೆ.

 ವಿದೇಶಿ ಪ್ರಜೆಗಳಿಗೆ ಪೌರತ್ವ ನೀಡಿಕೆಗೆ ಸಂಬಂಧಿಸಿದ ನೀತಿ ಹಾಗೂ ಇದರಿಂದ ವಿದೇಶಗಳ ಜೊತೆಗಿನ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದೆಂದು ಹೇಳಿ ಮಾಹಿತಿಯನ್ನು ನೀಡಲು ಕೇಂದ್ರ ಸರಕಾರ ನಿರಾಕರಿಸಿತ್ತು.

   ಸಿಎಎ ಕಾಯ್ದೆ ಭಾರತದ ಅಂತರಿಕ ವಿಚಾರವೆಂದು ಹೇಳಿದ್ದ ಕೇಂದ್ರ ಸರಕಾರವು, ಇದೀಗ ಸಿಎಎ ಕಾಯ್ದೆಯ ಕರಡು ಪ್ರತಿಯ ವಿವರಗಳ ಬಹಿರಂಗದಿಂದ ಹೊರದೇಶಗಳ ಜೊತೆಗಿನ ಬಾಂಧವ್ಯಕ್ಕೆ ಧಕ್ಕೆಯಾಗಲಿದೆಯೆಂದು ಹೇಳಿರುವುದು ತನ್ನ ಹಿಂದಿನ ನಿಲುವಿನಿಂದ ವ್ಯತಿರಿಕ್ತವಾಗಿ ನಡೆದುಕೊಂಡಂತಾಗಿದೆ ಎಂದು ‘huffpost india' ವರದಿಯಲ್ಲಿ ತಿಳಿಸಿದೆ.

  ಸಿಎಎ ಕಡತಗಳ ವಿವರಗಳನ್ನು ಬಹಿರಂಗಪಡಿಸುವುದರಿಂದ ಹೊರರಾಷ್ಟ್ರಗಳ ಜೊತೆ ಭಾರತದ ಬಾಂಧವ್ಯದ ಮೇಲೆ ಹೇಗೆ ಪ್ರತಿಕೂಲ ಪರಿಣಾಮವಾಗಲಿದೆ. ಹೀಗಾಗಿ, 2005ರ ಆರ್‌ಟಿಐ ಕಾಯ್ದೆಯ ಸೆಕ್ಷನ್ 8(1) (ಎ) ಸೆಕ್ಷನ್ ಅನ್ವಯ ಇಂತಹ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ವಿನಾಯಿತಿಯನ್ನು ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ನಿರ್ದೇಶಕ ಬಿ.ಸಿ.ಜೋಶಿ ಅವರು ಆರ್‌ಟಿಐ ಅರ್ಜಿಗೆ ಉತ್ತರಿಸದೆ ಇರಲು ಕಾರಣ ನೀಡಿದ್ದಾರೆ.

 ಸಿಎಎ ಕರಡು ಕಾಯ್ದೆಯ ವಿವರಗಳನ್ನು ಕೋರಿ ‘huffpost india'    ಈ ವರ್ಷದ ಜನವರಿ 13ರಂದು ಸಲ್ಲಿಸಿ ಸಲ್ಲಿಸಿದ ಆರ್‌ಟಿಐ ಅರ್ಜಿಯನ್ನು ಕೇಂದ್ರ ಗೃಹ ಸಚಿವಾಲಯ ನಿರಾಕರಿಸಿರುವುದಕ್ಕೆ ಕೇಂದ್ರ ಸರಕಾರದ ಮಾಜಿ ಮಾಹಿತಿ ಆಯುಕ್ತ ಯಶೋವರ್ಧನ್ ಆಝಾದ್ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸಿಎಎ ಕರಡು ಕಾಯ್ದೆಯ ಕಡತಗಳ ಮಾಹಿತಿಯನ್ನು ಬಹಿರಂಗಪಡಿಸಲು ನಿರಾಕರಿಸಿರುವುದಕ್ಕೆ ಕೇಂದ್ರ ಸರಕಾರವು ತಪ್ಪು ಕಾರಣವನ್ನು ನೀಡಿದೆ ಎಂದವರು ಹೇಳಿದ್ದಾರೆ.

 ‘‘ ಆರ್‌ಟಿಐ ಕಾಯ್ದೆಯ ಸೆಕ್ಷನ್ 8 (1) ಎ ಬಗೆಗಿನ ಮೂಲಭೂತ ಅಂಶಗಳನ್ನು ತಿಳಿದಿರದಂತಹ ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳನ್ನು ಗೃಹ ಸಚಿವಾಲಯಂತಹ ಜವಾಬ್ದಾರಿಯುತ ಇಲಾಖೆಯು ಹೊಂದಿದೆ ಎಂದು ತಿಳಿದು ನನಗೆ ಅಚ್ಚರಿಯಾಗಿದೆ” ಎಂದವರು ಹೇಳಿದ್ದಾರೆ. ಈ ಕಾಯ್ದೆಯು ವಿದೇಶಗಳಲ್ಲಿ ನೆಲೆಸಿರುವ ಹಿಂದೂಗಳಿಗೆ ಸಂಬಂಧಿಸಿದ್ದಾಗಿದೆಯೇ ಹೊರತು ವಿದೇಶಿ ಸರಕಾರಗಳಿಗೆ ಸಂಬಂಧಿಸಿದ್ದಾಗಿಲ್ಲ. ಹೀಗಾಗಿ, ಈ ಕುರಿತ ಯಾವುದೇ ವಿವರಗಳನ್ನು ಬಹಿರಂಗಪಡಿಸುವುದರಿಂದ ಪರದೇಶಗಳ ಜೊತೆ ಪ್ರತಿಕೂಲ ಪರಿಣಾಮವಾಗಲಿದೆ’’ ಎಂಬ ವಾದದದಲ್ಲಿ ತಿರುಳಿಲ್ಲವೆಂದು ಅವರು ಹೇಳಿದ್ದಾರೆ.

 ‘‘ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಅದರ ಅನುಷ್ಠಾನವು ಭಾರತದ ಆಂತರಿಕ ವಿಚಾರ ಹಾಗೂ ಅದು ಭಾರತದ ಸಾರ್ವಭೌಮತೆಗೆ ಸಂಬಂಧಿಸಿದ್ದಾಗಿದೆಯೆಂದು ಹೇಳುವ ಮೂಲಕ ಕೇಂದ್ರ ಸರಕಾರವು ಹೊರದೇಶಗಳು ಹಾಗೂ ವಿಶ್ವಸಂಸ್ಥೆಯಂತಹ ಜಾಗತಿಕ ಸಂಸ್ಥೆಗಳ ಮೂಲಕ ವ್ಯಕ್ತವಾಗುತ್ತಿರುವ ಟೀಕೆಯನ್ನು ದೂರವಿಡುತ್ತಾ ಬಂದಿದೆ. ಗಡಿಯೊಳಗಿನ ವಿಷಯಗಳ ಬಗ್ಗೆ ತಾನಾಗಿಯೇ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಅದು ಹೇಳಿತ್ತು. ಆದರೆ ಸಿಎಎ ಕರಡು ಕಾಯ್ದೆಯ ವಿವರಗಳನ್ನು ಬಹಿರಂಗಪಡಿಸುವುದರಿಂದ ಹೊರದೇಶಗಳ ಜೊತೆಗಿನ ಬಾಂಧವ್ಯದ ಮೇಲೆ ಪ್ರತಿಕೂಲ ಪರಿಣಾಮವುಂಟಾಗುತ್ತದೆ ಎಂದು ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಹೇಳಿರುವುದು ಸರಕಾರದ ಅಧಿಕೃತ ನಿಲುವಿಗೆ ತೀರಾ ವ್ಯತಿರಿಕ್ತವಾಗಿದೆ.

- ವೆಂಕಟೇಶ ನಾಯಕ್

ಆಡಳಿತದಲ್ಲಿ ಪಾರದರ್ಶಕತೆ ಕುರಿತಾದ ಹಿರಿಯ ಕಾರ್ಯಕರ್ತರ ಆರ್‌ಟಿಐ ಅರ್ಜಿಗಳಿಗೂ ಉತ್ತರವಿಲ್ಲ

ಸಿಎಎ ಕರಡು ಕಾಯ್ದೆಗೆ ಸಂಬಂಧಿಸಿ ಸಲ್ಲಿಸಿದ ಇತರ ಆರ್‌ಟಿಐ ಅರ್ಜಿಗಳಿಗೂ ಕೇಂದ್ರ ಗೃಹ ಸಚಿವಾಲಯವು ನಿರಾಕರಿಸಿರುವುದು ಇದೀಗ ಬೆಳಕಿಗೆ ಬಂದಿದೆ.

  ಆಡಳಿತದಲ್ಲಿ ಪಾರದರ್ಶಕತೆ ಕುರಿತ ಹೋರಾಟಗಾರ ವೆಂಕಟೇಶನಾಯಕ್ ಅವರು ಸಿಎಎ ಕರಡು ಕಾಯ್ದೆಯ ವಿವರಗಳನ್ನು ಪಡೆಯಲು ಸಲ್ಲಿಸಿದ ಅರ್ಜಿಯನ್ನು ಕೇಂದ್ರ ಗೃಹ ಸಚಿವಾಲಯವು ಜನಗಣತಿ ಮಹಾನೋಂದಣಿದಾರರಿಗೆ ವರ್ಗಾಯಿಸಿತು. ಆದಾಗ್ಯೂ ಅರ್ಜಿ ವರ್ಗಾವಣೆ ಗಡು ಒಂದು ತಿಂಗಳಾದರೂ ಈವರೆಗೆ ಯಾವುದೇ ಉತ್ತರ ಬಂದಿಲ್ಲ. ಆರ್‌ಟಿಐ ಕಾಯ್ದೆಯ ಪ್ರಕಾರ ಸರಕಾರಿ ಅಧಿಕಾರಿಗಳು 30 ದಿನಗಳೊಳಗೆ ಆರ್‌ಟಿಐ ಅರ್ಜಿಗೆ ಉತ್ತರ ನೀಡಬೇಕಾಗುತ್ತದೆ.

 ಆರ್‌ಟಿಐ ಕಾಯ್ದೆಯನ್ನು ರೂಪಿಸುವಲ್ಲಿ ಹಾಗೂ ಅದಕ್ಕಾಗಿ ಅಭಿಯಾನ ನಡೆಸಿದ್ದ ಅರುಣಾ ರಾಯ್ ಅವರು ಕೂಡಾ ಸಿಎಎ ಕುರಿತಾಗಿ ಸಲ್ಲಿಸಿದ್ದ ಅರ್‌ಟಿಐ ಅರ್ಜಿಗೂ ಕೇಂದ್ರ ಸರಕಾರ ಪ್ರತಿಕ್ರಿಯಿಸಿಲ್ಲವೆಂದು ವೆಂಕಟೇಶ್ ನಾಯಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News