ಸ್ಲಂ, ಕಾಲನಿಗಳಲ್ಲಿ ಜನೌಷಧಿ ಕೇಂದ್ರ ತೆರೆಯಬೇಕು: ಸಂಸದ ಡಾ.ಉಮೇಶ್ ಜಾಧವ್

Update: 2020-03-08 18:32 GMT

ಕಲಬುರಗಿ, ಮಾ.8: ಬಡಜನರ ಪಾಲಿಗೆ ಸಂಜೀವಿನಿಯಾಗಿರುವ ಜನೌಷಧಿ ಕೇಂದ್ರಗಳು ಪ್ರತಿ ಸ್ಲಮ್, ಕಾಲನಿ, ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೆರೆಯುವಂತಾಗಲಿ ಎಂದು ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕೇಂದ್ರ ಸರಕಾರದ ಪೋಷಣ್ ಅಭಿಯಾನ ಮತ್ತು ಜನೌಷಧಿ ದಿವಸ್ ನಾಲ್ಕನೆ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದ ನೇರ ಪ್ರಸಾರ ವ್ಯವಸ್ಥೆ ಕಾರ್ಯಕ್ರಮಕ್ಕೂ ಮುನ್ನ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ದುಡಿದು ತಿನ್ನುವ ಬಡಜನರು ಮಾರಣಾಂತಿಕ ಕಾಯಿಲೆಗೆ ತುತ್ತಾದರೆ ಆಸ್ಪತ್ರೆ, ಔಷಧಿ ಅಂತ ಅಲೆಯಬೇಕಾಗುತ್ತದೆ. ಮೊದಲೆ ಆರ್ಥಿಕವಾಗಿ ಕುಗ್ಗಿರುವವರಿಗೆ ಇದು ಗಾಯದ ಮೇಲೆ ಬರೆ ಎಳೆದಂತೆ. ಹೀಗಾಗಿ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಔಷಧಿಗಳನ್ನು ಸರ್ವರಿಗೂ ಸಿಗಬೇಕು ಎಂಬ ಸದುದ್ದೇಶದಿಂದ ಕೇಂದ್ರ ಸರಕಾರವು ಜನೌಷಧಿ ಕೇಂದ್ರಗಳು ತೆರೆದಿದ್ದು, ಇಲ್ಲಿ ಶೇ.50 ರಿಂದ 75ರ ವರೆಗೆ ಕಡಿಮೆ ದರದಲ್ಲಿ ಔಷಧಿಗಳು ಸಿಗುತ್ತವೆ ಎಂದು ಅವರು ಹೇಳಿದರು.

250 ರೂ.ಬೆಲೆಯ ಎಂಟಿಬಾಯಟಿಕ್ 10 ಮಾತ್ರೆಗೆ ಜನೌಷಧಿ ಕೇಂದ್ರಗಳಲ್ಲಿ 51 ರೂ.ಗಳಿಗೆ ನಿಡಲಾಗುತ್ತದೆ. ಅದೇ ರೀತಿ 2000 ರೂ. ಬೆಲೆಯ ಎಂಟಿ ಕ್ಯಾನ್ಸರ್ 10 ಮಾತ್ರೆ 350 ರೂ.ಗಳಿಗೆ, 80 ರೂ.ಬೆಲೆಯ ಪೇನ್ ಕಿಲ್ಲರ್ 10 ಮಾತ್ರೆ 12 ರೂ.ಗಳಿಗೆ, 100 ರೂ. ಬೆಲೆಯ ಬೇಬಿ ಕೇರ್ 5 ಪ್ಯಾಡ್ 25 ರೂ. ಗಳಿಗೆ, 1000 ರೂ. ಬೆಲೆಯ 200 ಗ್ರಾಂ ಪ್ರೊಟೀನ್ ಪೌಡರ್ 225 ರೂ.ಗಳಿಗೆ ಲಭ್ಯವಿದೆ. ಹೀಗೆ ಅನೇಕ ಔಷಧಿಗಳು ಇಲ್ಲಿ ಕಡಿಮೆ ದರದಲ್ಲಿ ಸಿಗಲಿದ್ದು, ಬಡಜನರು ಇದರ ಲಾಭ ಪಡೆಯಬೇಕು ಎಂದು ಉಮೇಶ್ ಜಾಧವ್ ತಿಳಿಸಿದರು.

ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ಆರೋಗ್ಯ ದೃಷ್ಠಿಯಿಂದ ಜನೌಷಧಿ ಕೇಂದ್ರಗಳಲ್ಲಿ ನ್ಯಾಪಕಿನ್ ಪ್ಯಾಡ್ 1 ರೂ.ಗಳಿಗೆ ನೀಡಲಾಗುತ್ತಿದೆ. ಶಾಲಾ-ಕಾಲೇಜು, ಗ್ರಾಮಗಳಲ್ಲಿ ಅಂಗನವಾಡಿ-ಆಶಾ ಕಾರ್ಯಕರ್ತೆಯರು ಇದರ ಬಗ್ಗೆ ಆಂದೋಲನದ ಮಾದರಿಯಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.

ಜನೌಷಧಿ ಮಾತ್ರೆಗಳು ಗುಣಮಟ್ಟದಿಂದ ಕೂಡಿದೆ. ಕೆಲವರು ಅನಾವಶ್ಯಕವಾಗಿ ಕಡಿಮೆ ದರದ ಜನೌಷಧಿ ಮಾತ್ರೆಗಳು ಗುಣಮಟ್ಟವಿಲ್ಲವೆಂದು ಜನರನ್ನು ತಪ್ಪು ದಾರಿಗೆ ಎಳೆಯಲು ಬಯಸುತ್ತಿದ್ದಾರೆ. ಇದ್ಯಾವುದಕ್ಕೂ ಕಿವಿಗೊಡಬೇಡಿ ಎಂದು ಮನವಿ ಮಾಡಿದ ಅವರು, ಜನೌಷಧಿ ಮಾತ್ರೆಗಳು ಜಿ.ಎಂ.ಪಿ.ದೃಢೀಕೃತ ಮಾತ್ರೆಗಳಾಗಿದ್ದು, ಶೇ.100ರಷ್ಟು ಗುಣಮಟ್ಟದಿಂದ ಕೂಡಿದೆ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News