ಅಸ್ಸಾಂ: ಅಂತಿಮ ಎನ್‌ಆರ್‌ಸಿಯಿಂದ ಹೊರಗುಳಿದವರಿಗಾಗಿ 'ತಿರಸ್ಕೃತ ಚೀಟಿ' ಕೊಡುವ ಪ್ರಕ್ರಿಯೆ ಶೀಘ್ರ ಆರಂಭ

Update: 2020-03-09 03:38 GMT
ಫೈಲ್ ಫೋಟೊ

ಗುವಾಹತಿ, ಮಾ.9: ಅಸ್ಸಾಂನಲ್ಲಿ ಕಳೆದ ವರ್ಷ ಪ್ರಕಟಿಸಲಾದ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ (ಎನ್‌ಆರ್‌ಸಿ_ ಅಂತಿಮ ಕರಡುಪಟ್ಟಿಯಿಂದ ಹೊರಗುಳಿದವರಿಗೆ ಅಂತಿಮವಾಗಿ ’ತಿರಸ್ಕೃತ’ ಚೀಟಿ ನೀಡುವ ಕಾರ್ಯಕ್ಕೆ ಎನ್‌ಆರ್‌ಸಿ ಅಧಿಕಾರಿಗಳು ಮಾರ್ಚ್ 20ರಂದು ಚಾಲನೆ ನೀಡಲಿದ್ದಾರೆ. ಮೊದಲ ಹಂತದಲ್ಲಿ ಎನ್‌ಆರ್‌ಸಿಗೆ ಅರ್ಜಿ ಸಲ್ಲಿಸದ ಸುಮಾರು 4 ಲಕ್ಷ ಮಂದಿ ತಿರಸ್ಕೃತ ಚೀಟಿ ಪಡೆಯಲಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್ ಅವರ ಪರವಾಗಿ ರಾಜ್ಯ ವಿಧಾನಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ಸಂಸದೀಯ ಮತ್ತು ಗೃಹ ವ್ಯವಹಾರಗಳ ಖಾತೆ ಸಚಿವ ಚಂದ್ರಮೋಹನ್ ಪಟ್ವಾರಿ, "ಎನ್‌ಆರ್‌ಸಿ ತಿರಸ್ಕೃತ ಚೀಟಿಯಲ್ಲಿ, ನಿರ್ದಿಷ್ಟ ವ್ಯಕ್ತಿಯನ್ನು ಅಂತಿಮ ಪಟ್ಟಿಯಿಂದ ಹೊರಗಿಡಲು ಏನು ಕಾರಣ ಎನ್ನುವುದನ್ನು ನಮೂದಿಸಲಾಗುತ್ತದೆ" ಎಂದು ಹೇಳಿದ್ದಾರೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಅಂತಿಮ ಎನ್‌ಆರ್‌ಸಿ ಪ್ರಕಟಿಸಲಾಗಿದ್ದು, ರಿಜಿಸ್ಟ್ರಿಯಲ್ಲಿ ನೋಂದಾಯಿಸಲು 3,11,21,004 ಅರ್ಹರನ್ನು ಪಟ್ಟಿ ಮಾಡಲಾಗಿದೆ. ಅದರೆ 19,06,657 ಮಂದಿಯನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇದಾದ ಏಳು ತಿಂಗಳ ಬಳಿಕ ಇದೀಗ ತಿರಸ್ಕೃತ ಪಟ್ಟಿಯನ್ನು ನೀಡುವ ಕಾರ್ಯ ಆರಂಭವಾಗುತ್ತಿದೆ.

"ಸುಮಾರು 33 ಕೋಟಿ ಮಂದಿ ಎನ್‌ಆರ್‌ಸಿಯಲ್ಲಿ ಸೇರ್ಪಡೆ ಮಾಡಲು ಅರ್ಜಿ ಸಲ್ಲಿಸಿದ್ದಾರೆ. ಸುಮಾರು 40 ಲಕ್ಷ ಮಂದಿಯನ್ನು ಕಳೆದ ವರ್ಷದ ಜುಲೈ 30ರಂದು ಪ್ರಕಟಿಸಲಾದ ಕರಡು ಎನ್‌ಆರ್‌ಸಿಯಿಂದ ಹೊರಗಿಡಲಾಗಿದೆ" ಎಂದು ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಸುಮಾರು 36 ಲಕ್ಷ ಮಂದಿ ಸೇರ್ಪಡೆಗೆ ಕ್ಲೇಮ್ ಸಲ್ಲಿಸಿದ್ದರೆ. ನಾಲ್ಕು ಲಕ್ಷ ಮಂದಿ ಅರ್ಜಿ ಸಲ್ಲಿಸದೇ ಪ್ರಕ್ರಿಯೆಯಿಂದ ಹೊರಗುಳಿದಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ತಿರಸ್ಕೃತ ಚೀಟಿ ನೀಡುವ ಯೋಜನೆ ಮೂರು ಹಂತಗಳಲ್ಲಿ ಜಾರಿಗೆ ಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News