ಜನಪ್ರತಿನಿಧಿಗಳ 450 ಕೋಟಿ ರೂ. ಬಾಕಿ ಅನುದಾನ ಶೀಘ್ರ ಬಿಡುಗಡೆ: ಬಿ.ಎಸ್.ಯಡಿಯೂರಪ್ಪ

Update: 2020-03-09 18:35 GMT

ಬೆಂಗಳೂರು, ಮಾ.9: ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ 450 ಕೋಟಿ ಬಾಕಿ ಅನುದಾನವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ಸೋಮವಾರ ವಿಧಾನ ಪರಿಷತ್‌ನಲ್ಲಿ ಮಧ್ಯಾಹ್ನ ಭೋಜನ ನಂತರ ಆರಂಭವಾದ ಚುಕ್ಕೆ ಗುರುತಿನ ಪ್ರಶ್ನೆ ಚರ್ಚೆಯಲ್ಲಿ ಜೆಡಿಎಸ್ ಸದಸ್ಯ ಬೋಜೇಗೌಡ ಮಾತನಾಡಿ, ಶಾಸಕರ ನಿಧಿ ಬಿಡುಗಡೆಯಾಗಿಲ್ಲ. ಈ ತಿಂಗಳ ಒಳಗೆ ಹಣ ಬಿಡುಗಡೆಯಾಗದೇ ಹೋದಲ್ಲಿ ಅನುದಾನ ಲ್ಯಾಪ್ಸ್ ಆಗಲಿದೆ. ಹಾಗಾಗಿ ಕೂಡಲೇ ಶಾಸಕರ ಅನುದಾನದ 450 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಬಿ.ಎಸ್.ಯಡಿಯೂರಪ್ಪ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಗೆ 700 ಕೋಟಿ ರೂ. ಪಿಡಿ ಖಾತೆಯಲ್ಲಿದೆ. ಆದರೆ, ಅದರ ಬಳಕೆ ಹೇಗೆ ಎಂದು ಮುಂದೆ ನೋಡೋಣ. ಈಗ ಸದಸ್ಯರ ಬೇಡಿಕೆಯಂತೆ ತಕ್ಷಣಕ್ಕೆ ಬಾಕಿಯಿರುವ 450 ಕೋಟಿ ರೂ. ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅದೇ ರೀತಿ, ಅಮೃತ್ ಮಹಲ್ ಬಳಿ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವ ಜತೆಗೆ ಅಮೃತ ಮಹಲ್ ಕಾವಲ್ ಭೂಮಿ ಕಬಳಿಕೆ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ. ಇರುವ ಭೂಮಿ ಉಳಿಸಿಕೊಳ್ಳಲು ಖುದ್ದು ನಾನೇ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದರು.

ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ಸಂಬಂಧ ಕೇಂದ್ರ ಜಲಸಂಪನ್ಮೂಲ ಸಚಿವರು, ಅಧಿಕಾರಿಗಳನ್ನು ಭೇಟಿ ಮಾಡಿ ಯೋಜನೆ ಅನುಷ್ಠಾನಕ್ಕೆ ಹೆಚ್ಚು ಹಣ ನೀಡಲು ಒತ್ತಾಯ ಮಾಡಲಾಗುತ್ತದೆ ಎಂದ ಅವರು, ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿಗೆ ಗಮನ ಹರಿಸಲಾಗುತ್ತದೆ. ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಲಾಗುತ್ತದೆ. ರಸ್ತೆಗಳ ವ್ಯವಸ್ಥೆ, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕ್ರಮ ಕೈಗೊಂಡು ಎರಡು ಮೂರು ವರ್ಷದಲ್ಲಿ ಬೆಂಗಳೂರು ಅಭಿವೃದ್ಧಿಯಾಗಲಿದೆ ಎಂದರು.

ನಂತರ ಧ್ವನಿ ಮತದ ಮೂಲಕ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯವನ್ನು ವಿಧಾನ ಪರಿಷತ್ ಅಂಗೀಕರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News