ನಿರಾಶ್ರಿತರಿಗಾಗಿ ಸಿಎಎ ಎನ್ನುತ್ತಲೇ ಹಿಂದೂ, ಸಿಖ್ ನಿರಾಶ್ರಿತರ 200 ಕೋ.ರೂ. ತಡೆಹಿಡಿದ ಕೇಂದ್ರ

Update: 2020-03-10 16:02 GMT

ಜಮ್ಮು, ಮಾ.10: ಸೂಕ್ತ ದಾಖಲೆ ಪತ್ರ ಒದಗಿಸದ ಕಾರಣ 1947ರಿಂದಲೂ ಜಮ್ಮು ಮತ್ತು ಕಾಶ್ಮೀರದಲ್ಲಿ ವಾಸಿಸುತ್ತಿರುವ ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರ ಪರಿಹಾರ ಮತ್ತು ಪುನರ್ವಸತಿ ಯೋಜನೆಗೆ ನಿಗದಿಯಾಗಿದ್ದ 200 ಕೋಟಿ ರೂ. ಮೊತ್ತದ ಪ್ಯಾಕೇಜನ್ನು ಕೇಂದ್ರ ಗೃಹ ಸಚಿವಾಲಯ ಸ್ಥಗಿತಗೊಳಿಸಿದೆ ಎಂದು ಪಲ್ಲವಿ ಸರೀನ್ ಅವರ ವಿಶೇಷ ವರದಿಯನ್ನು Thewire.in ವರದಿ ಮಾಡಿದೆ. ಈ ಕುರಿತು ಗೃಹ ವ್ಯವಹಾರದ ಕುರಿತ ರಾಜ್ಯಸಭೆಯ ಸ್ಥಾಯಿ ಸಮಿತಿಯ ಎದುರು ಕೇಂದ್ರ ಗೃಹ ಇಲಾಖೆ ಮಾಹಿತಿ ನೀಡಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರಕಾರ, ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂ ಹಾಗೂ ಇತರ ಅಲ್ಪಸಂಖ್ಯಾತರು ಭಾರತದಲ್ಲಿ ವಿಶೇಷ ಪೌರತ್ವ ಹಕ್ಕುಗಳನ್ನು ಹೊಂದಿರುತ್ತಾರೆ. ಆದರೆ ಬಹುತೇಕ ಹಿಂದು ಮತ್ತು ಸಿಖ್ ಜನಾಂಗದವರೇ ಇರುವ ಪಶ್ಚಿಮ ಪಾಕಿಸ್ತಾನ ನಿರಾಶ್ರಿತರು (1947ರಿಂದಲೂ ಜಮ್ಮು ಮತ್ತು ಕಾಶ್ಮೀರದಲ್ಲಿ ವಾಸಿಸುತ್ತಿರುವವರು) ಈಗ ಸೂಕ್ತ ದಾಖಲೆ ಪತ್ರ ಹೊಂದಿಲ್ಲದ ಕಾರಣ ತಮ್ಮ ಪುನರ್ವಸತಿಗೆಂದು ಮೀಸಲಿರಿಸಿದ ಹಣವನ್ನು ಕಳೆದುಕೊಳ್ಳುವ ಪರಿಸ್ಥಿತಿಯಿದೆ. 2019-20ರ ಕೇಂದ್ರ ಬಜೆಟ್‌ನಲ್ಲಿ ಪಶ್ಚಿಮ ಪಾಕಿಸ್ತಾನ ನಿರಾಶ್ರಿತರ ಪರಿಹಾರ ಮತ್ತು ಪುನರ್ವಸತಿ ಅನುದಾನವನ್ನು 200 ಕೋಟಿ ರೂ.ಯಿಂದ ಕೇವಲ 1 ಕೋಟಿ ರೂ.ಗೆ ಇಳಿಸಲಾಗಿದೆ. ಇದಕ್ಕೆ ಗೃಹ ಇಲಾಖೆ ನೀಡಿರುವ ಕಾರಣ ‘ ಈ ಹಿಂದೆ ನಿಗದಿಯಾಗಿದ್ದ ಅನುದಾನವನ್ನು ಬಳಸಿಕೊಳ್ಳಲು ತೋರಿದ ನಿರಾಸಕ್ತಿ’ .

‘ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಯಾಗಿರುವ ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರ ಕುಟುಂಬಕ್ಕೆ ಆರ್ಥಿಕ ನೆರವು ’ ಎಂಬ ಹೆಸರಿನ ಈ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಜಮ್ಮು ಮತ್ತು ಕಾಶ್ಮೀರ ಸರಕಾರ ಇದುವರೆಗೆ ಅಂತಿಮಗೊಳಿಸಿಲ್ಲ. ಆದ್ದರಿಂದ ಅನುದಾನವನ್ನು 1 ಕೋಟಿ ರೂ.ಗೆ ಇಳಿಸಲಾಗಿದೆ ಎಂದು ಗೃಹ ಸಚಿವಾಲಯ ವಿವರಿಸಿದೆ. ಈ ನಿರಾಶ್ರಿತರಿಗೆ 1947ರಿಂದಲೂ ನಿರಾಕರಿಸುತ್ತಾ ಬಂದಿರುವ ಪೌರತ್ವ ಹಕ್ಕನ್ನು ಈಗ ಮಂಜೂರುಗೊಳಿಸಿದ ಸಂದರ್ಭದಲ್ಲೇ ಇವರ ಪರಿಹಾರ ಮತ್ತು ಪುನರ್ವಸತಿಗೆ ನಿಗದಿಯಾಗಿರುವ ಅನುದಾನವನ್ನು 200 ಕೋಟಿ ರೂ.ಯಿಂದ 1 ಕೋಟಿ ರೂ.ಗೆ ಇಳಿಸಿರುವುದು ವಿಪರ್ಯಾಸವಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 370 ಮತ್ತು 35ಎ ವಿಧಿ ರದ್ದುಗೊಳಿಸಿದ ಬಳಿಕ ಈ ನಿರಾಶ್ರಿತರಿಗೆ ಭಾರತದಲ್ಲಿ ಹೆಚ್ಚಿನ ಅನುಕೂಲ ದೊರಕಲಿದೆ ಎಂಬ ನಿರೀಕ್ಷೆಯಿತ್ತು. ಆದರೆ ಅನುದಾನವನ್ನು ಕೇವಲ 1 ಕೋಟಿ ರೂ.ಗೆ ಇಳಿಸುವ ಮೂಲಕ ಕೇಂದ್ರ ಸರಕಾರ ಈ ನಿರೀಕ್ಷೆಯನ್ನು ಹುಸಿಗೊಳಿಸಿದೆ. ತಮಗೆ ಕೇಂದ್ರ ಸರಕಾರದಿಂದ ಇದುವರೆಗೂ ಪರಿಹಾರ ಅಥವಾ ಪುನರ್ವಸತಿ ನೆರವು ದೊರಕಿಲ್ಲ ಎಂದು ನಿರಾಶ್ರಿತರು ಹೇಳಿದ್ದಾರೆ.

ಪುನರ್ವಸತಿ ಯೋಜನೆಯಡಿ ಫಲಾನುಭವಿಗಳನ್ನು ಗುರುತಿಸಲು ಜಮ್ಮು ಮತ್ತು ಕಾಶ್ಮೀರದ ಈ ಹಿಂದಿನ ಸರಕಾರ ಗುರುತು ಪತ್ರಗಳನ್ನು ನೀಡುವ ವ್ಯವಸ್ಥೆ ಆರಂಭಿಸಿತ್ತು. ಈ ಹಿಂದೆ, 1951 ಮತ್ತು 1957ರ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಪರಿಹಾರ ಒದಗಿಸಲಾಗುವುದು ಎಂದು ಸರಕಾರ ಹೇಳಿತ್ತು. ಆದರೆ ಜಮ್ಮು ಕಾಶ್ಮೀರದಲ್ಲಿ 1967ರವರೆಗೂ ಚುನಾವಣೆ ನಡೆದಿಲ್ಲ. ಈ ಬಗ್ಗೆ ನಿರಂತರ ಪತ್ರ ವ್ಯವಹಾರದ ಬಳಿಕ ಕಡೆಗೂ ಈ ಷರತ್ತನ್ನು ಸರಕಾರ ಕೈಬಿಟ್ಟಿದೆ ಎಂದು ಪಶ್ಚಿಮ ಪಾಕಿಸ್ತಾನ ನಿರಾಶ್ರಿತರ ಕ್ರಿಯಾ ಸಮಿತಿ(ಡಬ್ಲೂಪಿಆರ್‌ಎಸಿ)ಯ ಅಧ್ಯಕ್ಷ ಲಭಾರಾಮ್ ಗಾಂಧಿ ಹೇಳಿದ್ದಾರೆ. ಇಂತಹ ಸಮಸ್ಯೆಗಳನ್ನು ಪರಿಹರಿಸಲು ಪರಿಹಾರ ಆಯುಕ್ತರನ್ನು ನೇಮಿಸಬೇಕು ಎಂದು ಸಮಿತಿ ಒತ್ತಾಯಿಸಿದೆ. ಆದರೆ, ಕಾನೂನುಬದ್ಧ ಉತ್ತರಾಧಿಕಾರಿ ಪ್ರಮಾಣಪತ್ರ, ಉತ್ತರಾಧಿಕಾರ ಪ್ರಮಾಣಪತ್ರ, ಕಂದಾಯ ದಾಖಲೆಯ ಪ್ರತಿ ಅಥವಾ ಮೂಲವಾಸಸ್ಥಳದ ಪ್ರಮಾಣಪತ್ರ(1947 ಅಥವಾ ಆ ಬಳಿಕ ಕುಟುಂಬ ಎಲ್ಲಿಂದ ವಲಸೆ ಬಂದಿದೆ ಎಂಬ ಪ್ರಮಾಣ ಪತ್ರ) ಸಹಿತ ಇನ್ನಿತರ ದಾಖಲೆಪತ್ರಗಳನ್ನು ಒದಗಿಸುವುದನ್ನು ಕಡ್ಡಾಯ ಮಾಡಲಾಗಿದೆ. ಕುಟುಂಬವು ನಿರಾಶ್ರಿತವಾಗಿ ಒಂದು ದೇಶದಿಂದ ಪಲಾಯನ ಮಾಡುವಾಗ ಅವರು ಜೀವ ಉಳಿಸಿಕೊಳ್ಳಲು ಮೊದಲ ಆದ್ಯತೆ ನೀಡುತ್ತಾರೆ. ದಾಖಲೆಪತ್ರ ಒಟ್ಟುಗೂಡಿಸುವತ್ತ ಗಮನ ನೀಡುವ ವ್ಯವಧಾನ ಇವರಲ್ಲಿ ಇರುವುದಿಲ್ಲ ಎಂದು ಲಭಾರಾಮ್ ಗಾಂಧಿ ಹೇಳಿದ್ದಾರೆ.

ಕಂದಾಯ ದಾಖಲೆಯ ಬದಲು 1971 ಅಥವಾ 1975ರ ಲೋಕಸಭಾ ಚುನಾವಣೆಯ ಮತದಾರರ ಪಟ್ಟಿಯ ಪ್ರತಿ ಒದಗಿಸುವ ಆಯ್ಕೆ ನೀಡಲಾಗಿದೆ. ಆದರೆ ಈ ಪಟ್ಟಿಯಲ್ಲಿ ಇವರನ್ನು ಎನ್‌ಪಿಆರ್(ನಾನ್ ಪರ್ಮನೆಂಟ್ ರೆಸಿಡೆಂಟ್ ಆಫ್ ದಿ ಸ್ಟೇಟ್)- ರಾಜ್ಯದ ಶಾಶ್ವತ ನಿವಾಸಿಗಳಲ್ಲ ಎಂದು ಉಲ್ಲೇಖಿಸಲಾಗಿದೆ. ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರು ಅಥವಾ ಪಂಜಾಬ್, ಒಡಿಶಾದ ನಿವಾಸಿಗಳಿಗೂ ಎನ್‌ಪಿಆರ್ ಎಂಬ ಪದವನ್ನೇ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರನ್ನು ಹೇಗೆ ಗುರುತಿಸಲಾಗುತ್ತದೆ ಎಂದು ಗಾಂಧಿ ಪ್ರಶ್ನಿಸಿದ್ದಾರೆ.

 ಹಲವು ಪಶ್ಚಿಮ ಪಾಕಿಸ್ತಾನ ಕುಟುಂಬಗಳು ಪಂಜಾಬ್ ಹಾಗೂ ಇತರ ರಾಜ್ಯಗಳಿಗೆ ತೆರಳಿ ಅಲ್ಲಿ ಭಾರತೀಯ ಪೌರರಿಗೆ ಲಭಿಸುವ ಎಲ್ಲಾ ಹಕ್ಕುಗಳನ್ನೂ ಹೊಂದಿದ್ದಾರೆ. ಆದರೆ ಶೇಖ್ ಅಬ್ದುಲ್ಲಾ ಸರಕಾರ ಇವರನ್ನು ರಾಜ್ಯದಿಂದ ಹೊರಗೆ ತೆರಳದಂತೆ ತಡೆದು ಅವರಿಗೆ ಪೌರತ್ವ ಹಕ್ಕು ನೀಡುವುದಾಗಿ ಭರವಸೆ ನೀಡಿತ್ತು. ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿರುವ ಪಶ್ಚಿಮ ಪಾಕಿಸ್ತಾನ ನಿರಾಶ್ರಿತರಿಗೆ ಲೋಕಸಭಾ ಚುನಾವಣೆಗಳಲ್ಲಿ ಮತ ಚಲಾಯಿಸುವ ಹಕ್ಕು ಇದೆ. ಆದರೆ 2019ರ ಆಗಸ್ಟ್ 5ರವರೆಗೆ ಇವರಿಗೆ ವಿಧಾನಸಭೆ ಚುನಾವಣೆ ಅಥವಾ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತ ಚಲಾಯಿಸುವ ಅಧಿಕಾರ ಇರಲಿಲ್ಲ. ಈಗ ಅಧಿಕೃತ ಆದೇಶ ಜಾರಿಯಾಗದಿದ್ದರೂ ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರು ಭಾರತೀಯ ಪೌರರು ಹೊಂದಿರುವ ಎಲ್ಲಾ ಹಕ್ಕನ್ನೂ ಹೊಂದಿದ್ದಾರೆ ಎಂದು ಕಾನೂನು ತಜ್ಞರು ಹೇಳಿದ್ದಾರೆ.

ವಾಧ್ವಾ ಸಮಿತಿಯ ವರದಿ

ಜಮ್ಮು ಕಾಶ್ಮೀರ ಸರಕಾರ ನೇಮಿಸಿದ ವಾಧ್ವಾ ಸಮಿತಿ 2007ರಲ್ಲಿ ಸರಕಾರಕ್ಕೆ ಸಲ್ಲಿಸಿರುವ ವರದಿಯ ಪ್ರಕಾರ, ಪಶ್ಚಿಮ ಪಾಕಿಸ್ತಾನದ 5,764 ಕುಟುಂಬಗಳ 47,215 ಮಂದಿ ಜಮ್ಮು ಮತ್ತು ಕಾಶ್ಮೀರದ ಹಲವೆಡೆ ನೆಲೆಸಿದ್ದಾರೆ. ಇವರಿಗೆ ಸರಕಾರದಿಂದ ಯಾವುದೇ ಭೂಮಿ ಮಂಜೂರಾಗಿಲ್ಲ. ಆದರೆ ಇವರು 45,466 ಕನಾಲ್ ಜಮೀನನ್ನು(8 ಕನಾಲ್ ಎಂದರೆ 1 ಎಕ್ರೆ) ಅಕ್ರಮವಾಗಿ ಸ್ವಾಧೀನ ಪಡಿಸಿಕೊಂಡಿದ್ದಾರೆ. ಇವರಿಗೆ ಎನ್‌ ಪಿಆರ್ ಸ್ಥಾನಮಾನ ನೀಡಿರುವುದರಿಂದ ಜಮೀನಿನ ಹಕ್ಕನ್ನು ನೀಡಲಾಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News