ಮರಗಳನ್ನು ಕಡಿದ ಪ್ರಕರಣ: ತಹಶೀಲ್ದಾರ್ ಅಮಾನತಿಗೆ ಆಗ್ರಹಿಸಿ ತುಮಕೂರು ಡಿಸಿ ಕಚೇರಿ ಮುಂದೆ ಧರಣಿ

Update: 2020-03-10 18:48 GMT

ತುಮಕೂರು, ಮಾ.10: ತೆಂಗಿನ ಮರ ಹಾಗೂ ಅಡಿಕೆ ಮರಗಳನ್ನು ಕಡಿಯಲು ಆದೇಶ ಮಾಡಿರುವ ತಹಶೀಲ್ದಾರ್ ಮಮತಾ ಅವರನ್ನು ಅಮಾನತುಗೊಳಿಸಬೇಕು ಹಾಗೂ ನೊಂದ ರೈತರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ರೈತಪರ ಹಾಗೂ ಕನ್ನಡ ಪರ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ರೈತರು, ಮರಗಳನ್ನು ಕಡಿಯಲು ಆದೇಶ ನೀಡಿರುವ ತಹಶೀಲ್ದಾರ್, ಆರ್‍ಐ ಹಾಗೂ ಗ್ರಾಮ ಲೆಕ್ಕಿಗರ ಮೇಲೆ ಪೊಲೀಸರು ದೂರು ದಾಖಲಿಸಿಕೊಳ್ಳಬೇಕು, ಜಿಲ್ಲಾಧಿಕಾರಿಗಳು ತಹಶೀಲ್ದಾರ್ ಅವರ ಅಮಾನತಿಗೆ ಶಿಫಾರಸ್ಸು ಮಾಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಆನಂದ್‍ ಪಟೇಲ್ ಒತ್ತಾಯಿಸಿದರು.

ತಹಶೀಲ್ದಾರ್ ಪೊಲೀಸರಿಗೆ ಬರೆದಿರುವ ಪತ್ರದಲ್ಲಿ ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾರೆ ಎಂಬ ಉಲ್ಲೇಖವಿದೆ, ಜಿಲ್ಲಾಧಿಕಾರಿಗಳು ಇದಕ್ಕೆ ಅನುಮತಿ ನೀಡಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ತೆಂಗು ಹಾಗೂ ಅಡಿಕೆ ಮರಗಳನ್ನು ಕಳೆದುಕೊಂಡಿರುವ ಕುಟುಂಬಕ್ಕೆ ತೋಟಗಾರಿಕೆ ಇಲಾಖೆಯ ಪ್ರಕಾರ ಪರಿಹಾರ ನೀಡದೇ ಐವತ್ತು ಲಕ್ಷ ರೂ. ಪರಿಹಾರ ನೀಡಿ ಅವರ ಜೀವನಕ್ಕೆ ನೆರವಾಗಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಹಲವು ಕಡೆ ಸರ್ಕಾರಿ ಭೂಮಿ ಒತ್ತುವರಿ ಆಗಿದೆ ಅವುಗಳನ್ನು ತೆರವುಗೊಳಿಸಿದ ಅಧಿಕಾರಿಗಳು ಬಡ ರೈತ ಕುಟುಂಬವನ್ನು ಬೀದಿಗೆ ತಂದಿದ್ದಾರೆ, ಒಂದು ವಾರದೊಳಗೆ ತಹಶೀಲ್ದಾರ್ ಅವರ ಮೇಲೆ ಕ್ರಮ ಕೈಗೊಳ್ಳದಿದ್ದರೆ, ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ ಅವರು, ತಹಶೀಲ್ದಾರ್ ಅವರನ್ನು ಅಮಾನತುಗೊಳಿಸಿ ಇಲಾಖಾ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿ, ಜಿಲ್ಲಾಡಳಿತದಿಂದ ವಿವಾದಿತ ಜಾಗದ ಬಗ್ಗೆ ಸರ್ವೆ ನಡೆಸಿ ವರದಿ ಪಡೆಯುತ್ತೇನೆ, ತಹಶೀಲ್ದಾರ್ ಅಜಾಗರೂಕತೆಯಿಂದ ಇಂತಹ ಘಟನೆ ಆಗಿದ್ದು, ಪ್ರಕರಣದ ಸಂಬಂಧ ಈಗಾಗಲೇ ಕಂದಾಯ ಸಚಿವರು ಹಾಗೂ ಪ್ರಧಾನ ಕಾರ್ಯದರ್ಶಿಗಳಿಗೆ ವರದಿ ಸಲ್ಲಿಸಿದ್ದು, ಸರ್ವೇ ವರದಿ ಬಂದ ನಂತರ ಸಂತ್ರಸ್ಥರಿಗೆ ಪರಿಹಾರ ವಿತರಣೆ ಮಾಡುವುದಾಗಿ ತಿಳಿಸಿದರು.

ಘಟನೆಗೆ ಸಂಬಂಧಿಸಿದಂತೆ ತಹಶೀಲ್ದಾರ್ ಅವರು ವರದಿ ನೀಡಿದ್ದು ಈ ಬಗ್ಗೆ ಉಪವಿಭಾಗಾಧಿಕಾರಿಗಳು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದ್ದು, ಉಪವಿಭಾಗಾಧಿಕಾರಿಗಳು ವರದಿ ಸಲ್ಲಿಸಿದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮುಖಂಡರು ಹಾಗೂ ದೂರುದಾರರನ್ನು ಒಳಗೊಂಡು ವಿಚಾರಣೆ ನಡೆಸುವುದಾಗಿ ಭರವಸೆ ನೀಡಿದರು.

ಪ್ರಕರಣದಲ್ಲಿ ಬೇರೆ ಯಾರೇ ಭಾಗಿಯಾಗಿದ್ದರೆ ಅವರ ಮೇಲೆ ಕ್ರಮವಹಿಸುತ್ತೇವೆ, ಮರ ಕಡಿದ ವಿಚಾರ ಗೊತ್ತಾದ ಮೇಲೆ ತಹಶೀಲ್ದಾರ್ ಸ್ಥಳಕ್ಕೆ ಹೋಗಿದ್ದಾರೆ ಎಂದ ಅವರು ಪ್ರಕರಣ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಇದ್ದಾಗಲೇ ಒತ್ತುವರಿ ತೆರವು ವಿಚಾರ ಗಮನಕ್ಕೆ ಬಂದಿಲ್ಲ, ಸಂಬಂಧಿಸಿದವರಿಗೆ ತಹಶೀಲ್ದಾರ್ ನೋಟೀಸ್ ನೀಡಿಲ್ಲ ಈ ಬಗ್ಗೆ ತಹಶೀಲ್ದಾರ್ ಅವರಿಂದ ವರದಿ ಪಡೆಯುವುದಾಗಿ ಅವರು ತಿಳಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಕೆಂಕೆರೆ ಸತೀಶ್, ಕೃಷಿಕ್ ಸಮಾಜದ ಜಗದೀಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಿವರತ್ನ, ಸಿದ್ದರಾಜು, ಕೀರ್ತಿ, ಸೂರ್ಯ, ಕನ್ನಡ ಸಂಘಟನೆ ಒಕ್ಕೂಟದ ರಾಜ್ಯಾಧ್ಯಕ್ಷ ನಾಗೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News