​ಕೊರೋನಾ ಭೀತಿ: ಕೇರಳ ದಿಗ್ಬಂಧನ, ಶಾಲಾ ಕಾಲೇಜುಗಳಿಗೆ ರಜೆ

Update: 2020-03-11 03:44 GMT

ತಿರುವನಂತಪುರ: ಭಾರತದಲ್ಲಿ ಹೊಸದಾಗಿ 18 ಕೊರೋನಾ ವೈರಸ್ ಸೋಂಕು ಪ್ರಕರಣ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 62ಕ್ಕೆ ತಲುಪಿದೆ.

ಕೇರಳದಲ್ಲಿ ಗರಿಷ್ಠ ಅಂದರೆ 8, ಮಹಾರಾಷ್ಟ್ರದಲ್ಲಿ 5, ಕರ್ನಾಟಕದಲ್ಲಿ 4 ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ಸೋಂಕು ಪ್ರಕರಣ ಮಂಗಳವಾರ ವರದಿಯಾಗಿದೆ. ಕೇರಳದಲ್ಲಿ ವೈರಸ್ ಸೋಂಕು ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಪುಣೆ ದಂಪತಿ, ಅವರ ಪುತ್ರಿ ಹಾಗೂ ದುಬೈ ಪ್ರವಾಸದಲ್ಲಿ ಅವರ ಸಹ ಪ್ರಯಾಣಿಕರಾಗಿದ್ದ 40 ಮಂದಿಯ ಗುಂಪಿನ ಪೈಕಿ ಒಬ್ಬರು, ಮುಂಬೈನಿಂದ ಪುಣೆಗೆ ಅವರನ್ನು ಮಾರ್ಚ್ 1ರಂದು ಕರೆತಂದ ಕಾರು ಚಾಲಕ ಹೀಗೆ ಪುಣೆಯಲ್ಲಿ ಐದು ಮಂದಿಗೆ ಸೋಂಕು ದೃಢಪಟ್ಟಿದೆ.

ಕೇರಳದಲ್ಲಿ ಎಂಟು ಪ್ರಕರಣ ಹೊಸದಾಗಿ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 14ಕ್ಕೆ ತಲುಪಿದೆ. ಈ ಹಿನ್ನೆಲೆಯಲ್ಲಿ ಕೇರಳದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲು ಸರ್ಕಾರ ನಿರ್ಧರಿಸಿದೆ. ಇನ್ನಷ್ಟು ಹರಡದಂತೆ ತಡೆಯುವ ಸಲುವಾಗಿ ಮಾರ್ಚ್ ಕೊನೆಯವರೆಗೆ ಶಿಕ್ಷಣ ಸಂಸ್ಥೆಗಳನ್ನು ಮತ್ತು ಸಿನಿಮಾ ಥಿಯೇಟರ್ ಮುಚ್ಚಲು ನಿರ್ಧರಿಸಿದೆ.

ಮೂರು ವರ್ಷದ ಸೋಂಕಿತ ಬಾಲಕನ ಪೋಷಕರಿಗೆ ಕೂಡಾ ಸೋಂಕು ತಗುಲಿದೆ. ಇವರಿಗೆ ಎರ್ನಾಕುಲಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಟ್ಟಾಯಂನಲ್ಲಿ ನಾಲ್ಕು ಹಾಗೂ ಪಟ್ಟಣಂತಿಟ್ಟದಲ್ಲಿ ಎರಡು ಪ್ರಕರಣಗಳು ಬೆಳಕಿಗೆ ಬಂದಿವೆ. ಪಟ್ಟಣಂತಿಟ್ಟದಲ್ಲಿ ಈ ಹಿಂದೆ ವೈರಸ್ ಪತ್ತೆಯಾದ ಮೂವರ ಜತೆಗೆ ಇವರು ಸಂಪರ್ಕದಲ್ಲಿದ್ದರು. ರಾಜ್ಯದಲ್ಲಿ ಒಟ್ಟು 1495 ಮಂದಿಯ ಮೇಲೆ ಕಣ್ಗಾವಲು ಇಡಲಾಗಿದ್ದು, ಈ ಪೈಕಿ 259 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.

ಮಂಗಳವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ತಿಂಗಳ 31ರವರೆಗೆ ವೈದ್ಯಕೀಯ ಸಂಸ್ಥೆಗಳು ಹೊರತುಪಡಿಸಿ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ಒಂದರಿಂದ ಏಳನೇ ತರಗತಿವರೆಗೆ ಯಾವುದೇ ಪರೀಕ್ಷೆಗಳು ಇರುವುದಿಲ್ಲ. ಮಾಸಾಂತ್ಯದ ವರೆಗೆ ಎಲ್ಲ ಟ್ಯೂಷನ್ ಸೆಂಟರ್‌ಗಳು ಕೂಡಾ ಕಾರ್ಯನಿರ್ವಹಿಸದಂತೆ ಸೂಚಿಸಲಾಗಿದೆ.

ಎಲ್ಲ ಧಾರ್ಮಿಕ ಸಂಘ ಸಂಸ್ಥೆಗಳು ಹಬ್ಬ ಹಾಗೂ ಉತ್ಸವಗಳನ್ನು ಸಾಮೂಹಿಕ ಸಭೆಗಳಿಲ್ಲದೇ ನಡೆಸುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮನವಿ ಮಾಡಿದ್ದಾರೆ. ಎಲ್ಲ ಸಿನಿಮಾ ಮಂದಿರಗಳನ್ನು ಮುಚ್ಚಲು ಆದೇಶಿಸಲಾಗಿದ್ದು, ಮದುವೆಯಂಥ ದೊಡ್ಡ ಸಮಾರಂಭಗಳನ್ನು ಕೂಡಾ ಮುಂದೂಡುವಂತೆ ಅವರು ಕೋರಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News