ಮಧ್ಯಪ್ರದೇಶ: ಸರಕಾರ ರಚನೆಯ ಹುಮ್ಮಸ್ಸಿನಲ್ಲಿದ್ದ ಬಿಜೆಪಿಗೆ ಸಂಕಷ್ಟ

Update: 2020-03-11 08:00 GMT

ಭೋಪಾಲ್: ಜ್ಯೋತಿರಾದಿತ್ಯ ಸಿಂಧ್ಯಾ ಅವರು 21 ಮಂದಿ ಕಾಂಗ್ರೆಸ್ ಶಾಸಕರೊಂದಿಗೆ ಪಕ್ಷ ತೊರೆದಿದ್ದು, ಇನ್ನೇನು ಬಿಜೆಪಿಗೆ ಮಧ್ಯಪ್ರದೇಶದ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಉರುಳಿಸುವುದು ಸುಲಭದ ಕೆಲಸ ಎಂದುಕೊಳ್ಳುವಷ್ಟರಲ್ಲಿ ಬಿಜೆಪಿಯೊಳಗಿನ ಭಿನ್ನಮತ ಪಕ್ಷಕ್ಕೆ ಮುಳುವಾಗುವ ಎಲ್ಲಾ ಸಾಧ್ಯತೆಗಳು ಕಾಣಿಸಿಕೊಂಡಿವೆ.

ಮಂಗಳವಾರ ಸಂಜೆ ಬಿಜೆಪಿ ಶಾಸಕ ನರೋತ್ತಮ್ ಮಿಶ್ರಾ ಹಾಗೂ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರ ಬೆಂಬಲಿಗರ ನಡುವೆ ಸಂಘರ್ಷಮಯ ವಾತಾವರಣವುಂಟಾಗಿದೆ. ಕಮಲ್ ನಾಥ್ ಆಡಳಿತವನ್ನು ಬುಡಮೇಲುಗಳಿಸುವ ಯತ್ನದಲ್ಲಿ ಇಬ್ಬರೂ ಶಾಮೀಲಾಗಿದ್ದಾರೆಂದೇ ತಿಳಿಯಲಾಗಿದೆ.

ಮಿಶ್ರಾ ಅವರನ್ನು ಬೆಂಬಲಿಸಿ ಬಿಜೆಪಿಯ ಹಲವರು ಘೋಷಣೆಗಳನ್ನು ಕೂಗಿದ್ದರಲ್ಲದೆ  ಕಾಂಗ್ರೆಸ್ ಸರಕಾರದಲ್ಲಿ ಉಂಟಾಗಿರುವ ಗೊಂದಲದ ಹಿಂದೆ ಚೌಹಾಣ್ ಅವರ ಪಾತ್ರದ ಕುರಿತಂತೆ ಪ್ರಶ್ನಿಸಿದ್ದಾರೆ. ಆದರೆ ಸರಕಾರವನ್ನು ಕೆಳಗಿಳಿಸುವ ಕಾರ್ಯದಲ್ಲಿ ತಾವು ತೊಡಗಿಲ್ಲ ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟದಿಂದಲೇ ಎಲ್ಲವೂ  ನಡೆದಿದೆ ಎಂದು ಇಬ್ಬರು ನಾಯಕರೂ ವಾದಿಸುತ್ತಿದ್ದಾರೆ.

ಸರಕಾರವನ್ನು ಹೋಳಿಯ ದಿನವೇ ಉರುಳಿಸಬೇಕೆಂಬ ಉದ್ದೇಶದಿಂದ ಇವರ ಕಾರ್ಯಾಚರಣೆಯನ್ನು ಆಪರೇಷನ್ ರಂಗಪಂಚಮಿ ಎಂದು ಹೆಸರಿಸಲಾಗಿತ್ತೆಂದು ಮೂಲಗಳು ತಿಳಿಸಿವೆ.

"ನಾನು ಯಾವುದೇ  ಆರೋಪಗಳನ್ನು ಮಾಡಿಲ್ಲ. ಆದರೆ ಮಿಶ್ರಾ ಹಾಗೂ ಚೌಹಾಣ್ ನಡುವೆ ಯಾರು ಸೀಎಂ ಆಗುತ್ತಾರೆಂಬ ವಿಚಾರದಲ್ಲಿ ಕಲಹವಿದೆ. ಒಬ್ಬರು ಸಿಎಂ ಹಾಗೂ ಇನ್ನೊಬ್ಬರು ಡೆಪ್ಯುಟಿ ಸೀಎಂ ಆಗುವ ಸಾಧ್ಯೆಯಿದೆ'' ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿಕೊಂಡಿದ್ದಾರೆ.

ಅತ್ತ ಬಿಜೆಪಿಯಲ್ಲಿನ ಬೆಳವಣಿಗೆಗಳಿಂದ  ಕರ್ನಾಟಕದ ರರೆಸಾರ್ಟ್ ನಲ್ಲಿ ತಂಗಿರುವ ಸಿಂಧ್ಯಾ ಬೆಂಬಲಿಗ ಶಾಸಕರಿಗೆ ನಿರಾಸೆಯಾಗಿದೆ. ಇವರ ಪೈಕಿ ಇಬ್ಬರು ಸಚಿವರೂ ಸೇರಿದಂತೆ ಹತ್ತು ಮಂದಿಗೆ ಬಿಜೆಪಿ ಸೇರಲು ಮನಸ್ಸಿಲ್ಲವೆಂದು ಹೇಳಲಾಗಿದ್ದು ಅವರು ಮತ್ತೆ ಕಾಂಗ್ರೆಸ್ ಜತೆಗೇ ಹೋಗುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News