ರಾಜಧಾನಿಯಲ್ಲೇ 150 ಎಕರೆ ಪ್ರದೇಶದಲ್ಲಿ ಚಿತ್ರನಗರಿ ನಿರ್ಮಾಣ: ಬಿ.ಎಸ್.ಯಡಿಯೂರಪ್ಪ

Update: 2020-03-12 17:54 GMT

ಬೆಂಗಳೂರು, ಮಾ.12: ಸಿನೆಮಾ ರಂಗದ ಶ್ರೇಯೋಭಿವೃದ್ಧಿಗೆ ರಾಜಧಾನಿ ಬೆಂಗಳೂರಿನಲ್ಲಿ ಬರೋಬ್ಬರಿ 150 ಎಕರೆ ಪ್ರದೇಶದಲ್ಲಿ ಚಿತ್ರನಗರಿ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಗುರುವಾರ ವಿಧಾನ ಪರಿಷತ್‌ನಲ್ಲಿ ಮಧ್ಯಾಹ್ನ ಭೋಜನ ನಂತರ ಆರಂಭವಾದ ಪ್ರಶ್ನೋತ್ತರ ವೇಳೆಯಲ್ಲಿ ಮಾಜಿ ಸಚಿವ ಜಯಮಾಲಾ ಅವರ ಚಿತ್ರರಂಗದ ಕನಸಾಗಿರುವ ಚಿತ್ರನಗರಿ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದರು.

ಮೈಸೂರು, ರಾಮನಗರ ಹಾಗೂ ಹೆಸರುಘಟ್ಟದಲ್ಲಿಯೂ ಚಿತ್ರನಗರಿ ನಿರ್ಮಾಣ ಮಾಡಲ್ಲ. ಬದಲಾಗಿ, ಬೆಂಗಳೂರು ವ್ಯಾಪ್ತಿಯಲ್ಲಿ 150 ಎಕರೆ ಭೂಮಿಯನ್ನು ಗುರುತು ಮಾಡಲಾಗಿದ್ದು, ಎಪ್ರಿಲ್ ಮೊದಲ ವಾರದಲ್ಲಿಯೇ ಹಿರಿಯ ಸಿನೆಮಾ ಕಲಾವಿದರೊಂದಿಗೆ ಜಾಗವನ್ನು ಪರಿಶೀಲನೆ ನಡೆಸಿದ ಬಳಿಕ, ಅಧಿಕೃತವಾಗಿ ಪ್ರಕಟಿಸಲಾಗುವುದೆಂದು ಮಾಹಿತಿ ನೀಡಿದರು.

ಈ ವೇಳೆ ಮಧ್ಯಪ್ರವೇಶಿಸಿದ ಜಯಮಾಲಾ, ಕನ್ನಡ ಸಿನೆಮಾ ರಂಗ ಮತ್ತಷ್ಟು ಬೆಳೆಯಬೇಕಾದರೆ, ಗ್ರಾಫಿಕ್ ಪಾರ್ಕ್, ತಾಂತ್ರಿಕ ಸೌಲಭ್ಯ ಹಾಗೂ ಚಿತ್ರೀಕರಣ ವೇಳೆ ವಿವಿಧ ಇಲಾಖೆಗಳಿಂದ ಪಡೆಯಬೇಕಾದ ಅನುಮತಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಬೇಕೆಂದು ಮನವಿ ಸಲ್ಲಿಸಿದರು.

ಇದಕ್ಕೆ ಉತ್ತರಿಸಿದ ಬಿ.ಎಸ್.ಯಡಿಯೂರಪ್ಪ, ಶೀಘ್ರದಲ್ಲಿಯೇ ಈ ಬಗ್ಗೆ ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News