ಬೇಸಿಗೆಯಲ್ಲಿ ನೀರಿನ ಕೊರತೆ ಇಲ್ಲ: ಸಚಿವ ರಮೇಶ್ ಜಾರಕಿಹೊಳಿ

Update: 2020-03-13 18:31 GMT

ಬೆಂಗಳೂರು, ಮಾ.13: ಬೇಸಿಗೆಯಲ್ಲಿ ರಾಜಧಾನಿ ಬೆಂಗಳೂರು ಸೇರಿ ಯಾವುದೇ ಪ್ರದೇಶಕ್ಕೂ ನೀರಿನ ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದಾಗಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ಶುಕ್ರವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿಂದು ಜಲಸಂಪನ್ಮೂಲ ಇಲಾಖೆಯ ಸಿವಿಲ್ ಇಂಜಿನಿಯರಿಂಗ್ ಸಂಘದ ಡೈರಿ ಮತ್ತು ಕ್ಯಾಲೆಂಡರ್ ಲೋಕಾರ್ಪಣೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಪ್ರಸ್ತುತ ವಾರ್ಷಿಕ ಸಾಲಿನಲ್ಲಿ ಉತ್ತಮ ಮಳೆಯಾಗಿದೆ. ಬಹುತೇಕ ಜಲಾಶಯಗಳಲ್ಲೂ ನೀರು ಇದೆ. ಈ ನೀರನ್ನು ಸರಿಯಾಗಿ ನಿರ್ವಹಣೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಈಗಾಗಲೇ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ರವಾನಿಸಲಾಗಿದೆ ಎಂದು ಅವರು ತಿಳಿಸಿದರು.

ಕಾವೇರಿ ಪಾತ್ರದಿಂದ ನೀರು ಪಡೆಯುವ, ಬೆಂಗಳೂರು ಸೇರಿದಂತೆ ಬೇರೆ ಯಾವುದೇ ನಗರಪ್ರದೇಶಗಳು ಜಲಾಶಯ ಮೂಲದಿಂದ ನೀರು ಪಡೆಯುತ್ತಿದ್ದರೆ ಆತಂಕ ಪಡುವ ಅಗತ್ಯವಿಲ್ಲ ಎಂದ ಅವರು, ಕಾವೇರಿ ನದಿ ಪ್ರಾಧಿಕಾರದ ಸೂಚನೆ ಅನುಸಾರ ತಮಿಳುನಾಡಿಗೆ ಅಗತ್ಯವಿದ್ದಷ್ಟು ನೀರು ಬಿಟ್ಟು ಆನಂತರವೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಲಾಗುವುದು ಎಂದರು.

ವಿಧಾನಮಂಡಲದ ಅಧಿವೇಶನ ಪೂರ್ಣಗೊಂಡ ಬಳಿಕ, ರಾಜ್ಯ ವ್ಯಾಪ್ತಿಯಲ್ಲಿನ ಪ್ರತಿಯೊಂದು ಜಲಾಶಯಗಳಿಗೂ ಭೇಟಿ ನೀಡಲಾಗುವುದು. ಅದೇ ರೀತಿ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಕನಸಿನ ಯೋಜನೆಯಾದ ಕೆಆರ್‌ಎಸ್ ಬಳಿ ಅಮ್ಯೂಸ್ ಮೆಂಟ್ ಉದ್ಯಾನವನ ಪ್ರಸ್ತಾವನೆಯನ್ನು ಪರಿಶೀಲನೆ ನಡೆಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News